ಅಂಕಗಳ ಬೆನ್ನಟ್ಟಿ ಹೋಗಬೇಡಿ: ನಿಖಿಲ ಸೊನ್ನದ

KannadaprabhaNewsNetwork |  
Published : Jun 30, 2025, 12:34 AM IST
ಜಮಖಂಡಿ: ರಾಯಲ್ ಪ್ಯಾಲೇಶ್ ಸಭಾಭವನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಧ್ಯಯನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಾರ್ಯಾಗಾರದಲ್ಲಿ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥರ‍್ಯಾಂಕ ಪಡೆದ ವಿದ್ಯಾರ್ಥಿ ನಿಖಿಲ ಸೊನ್ನದ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಅಂಕಗಳ ಬೆನ್ನಟ್ಟಿ ಹೋಗದೇ ನಿಮ್ಮ ಹಿಂದೆಯೇ ಓಡೋಡಿ ಬರುವ ರೀತಿಯಲ್ಲಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ನಿಖಿಲ ಸೊನ್ನದ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ವಿದ್ಯಾರ್ಥಿಗಳು ಅಂಕಗಳ ಬೆನ್ನಟ್ಟಿ ಹೋಗದೇ ನಿಮ್ಮ ಹಿಂದೆಯೇ ಓಡೋಡಿ ಬರುವ ರೀತಿಯಲ್ಲಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ನಿಖಿಲ ಸೊನ್ನದ ಹೇಳಿದರು. ನಗರದ ರಾಯಲ್ ಪ್ಯಾಲೇಸ್‌ ಕಾಲೇಜಿನ ಸಭಾಭವನದಲ್ಲಿ ಶನಿವಾರ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಧ್ಯಯನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಷಯಗಳು ಅರ್ಥವಾಗದೇ ಇದ್ದಲ್ಲಿ ಹುಡುಕಿ ಅಧ್ಯಯನ ಮಾಡುವ ಮನಸ್ಥಿತಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಾಲೇಜಿನ ಹಂತದಲ್ಲಿರುವ ವಿದ್ಯಾರ್ಥಿಗಳು ಅಹಂಕಾರ ಭಾವನೆ ಹೊಂದಿರಬಾರದು. ಹೊಂದಿದರೆ ನಮ್ಮ ವಿದ್ಯಾರ್ಥಿ ಜೀವನಕ್ಕೆ ಮುಳುವಾಗಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕಲಿಕಾ ಪ್ರಮಾಣ ಹೆಚ್ಚಾಗಿರಬೇಕು. ಕಾಲೇಜಿನ ಅಧ್ಯಯನ ಅವಧಿಯಲ್ಲಿ ನಿಯಂತ್ರಣ, ತಾಳ್ಮೆ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಶಿಸ್ತು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.

ಡಾ.ಸಿದ್ದು ಸೊನ್ನದ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಕೊಂಡರೆ ಮಾತ್ರ ಯಶಸ್ವಿ ಪಡೆಯಲು ಸಾಧ್ಯ. ಮಕ್ಕಳ ಸಾಧನೆಗಾಗಿ ತಂದೆ-ತಾಯಿ ಪೂರ್ಣಾವಧಿ ಶಿಕ್ಷಕರಾಗಬೇಕು. ಮಕ್ಕಳ ಬೆಳವಣಿಗೆ ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಮಕ್ಕಳ ಶಿಕ್ಷಣ ಕೆಳಮಟ್ಟದಲ್ಲಿಯೇ ಗಟ್ಟಿಯಾಗಿರಬೇಕು. ವಿದ್ಯೆ ಅರಿತುಕೊಂಡ ವಿದ್ಯಾರ್ಥಿಗಳ ಜೀವನಮಟ್ಟ ಸುಧಾರಣೆಯಾಗಲಿದೆ. ಎಲ್ಲ ಗಿಡಮರಗಳು ಹೂವುಗಳನ್ನು ಬಿಡುತ್ತದೆ. ಕೆಲವೊಂದು ಅರಳದೇ ಧರೆಗೆ ಬೀಳುತ್ತವೆ. ಕೆಲವೊಂದು ಅರಳುವ ಮೂಲಕ ಸುವಾಸನೆ ಬೀರುತ್ತವೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀಟ್ ಪರೀಕ್ಷೆಗೆ ದೇಶದಲ್ಲಿ ಅಂದಾಜು ₹22.09ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ವಿಜಯಪೂರದ ವಿದ್ಯಾರ್ಥಿ ನಿಖಿಲ ಸೊನ್ನದ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಅವರನ್ನು ಕರೆಯಿಸಿ ನಮ್ಮ ಕಾಲೇಜಿನ ವತಿಯಿಂದ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಛಲ ಮತ್ತು ಮನಸ್ಸಿನ ಏಕಾಗ್ರತೆ ಹೊಂದಿರುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲಿದ್ದಾರೆ. ಕೌಶಲ್ಯ, ಶಿಸ್ತು, ದೃಢ ನಿರ್ಧಾರಗಳು ವಿದ್ಯಾರ್ಥಿಗಳ ಜೀವನ ಶೈಲಿ ಗಟ್ಟಿಗೊಳಿಸುತ್ತದೆ. ಕಲಿಯುವ ಮನೋಭಾವನೆ ಇದ್ದರೆ ಸಾಧಿಸಲು ಸಾಕಷ್ಟು ಅವಕಾಶಗಳಿವೆ ಎಂದರು.

ವೇದಿಕೆಯಲ್ಲಿ ಸಂಸ್ಥೆ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಸಮಿತ್ರಾ ನ್ಯಾಮಗೌಡ, ಬಸವರಾಜ ಸೊನ್ನದ, ಡಾ.ಸಂಗು ನ್ಯಾಮಗೌಡ, ಲಕ್ಷಣ ಶಿರೋಳ,. ಪ್ರಾಚಾರ್ಯ ಎನ್.ಎಂ. ರೊಳ್ಳಿ, ಪ್ರಾಚಾರ್ಯೆ ರೀತಾ ಜೈನರ ಸಹಿತ ಹಲವರು ಇದ್ದರು.

ಇದೇ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ವಿಷಯ ಶಿಕ್ಷಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಾದ ಸ್ವಾತಿ ಸ್ವಾಗತಿಸಿದರು. ರಶ್ಮಿ ನಿರೂಪಿಸಿದರು. ರಾಧಿಕಾ ವಂದಿಸಿದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ