ಕನಕಪುರ: ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆದು ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಮೋಹನ್ ಬಾಬು ತಿಳಿಸಿದರು. ತಾಲೂಕಿನ ತುಂಗಣಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಯಾವುದೇ ಮಕ್ಕಳು ಶಿಕ್ಷಣವನ್ನು ಅರ್ಥಕ್ಕೆ ಮೊಟಕುಗೊಳಿಸಬಾರದು. ಶಿಕ್ಷಣ ಪಡೆಯಲು ಏನಾದರೂ ಸಮಸ್ಯೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಂಡು, ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಬಾಲ್ಯ ವಿವಾಹ ಕಾನೂನು ಬಾಹಿರ. 18 ವರ್ಷ ಒಳಪಟ್ಟ ಯಾವುದೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವುದು ಕಂಡು ಬಂದರೆ ಪಂಚಾಯಿತಿ ಅಧಿಕಾರಿಗಳು ಶಿಕ್ಷಕರಿಗೆ ತಿಳಿಸಿ ಬಾಲ್ಯ ವಿವಾಹ ತಡೆಗಟ್ಟಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಕ್ಕಳು ಮಾತನಾಡಿ, ಶಾಲೆ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.ಪಿಡಿಒ ಮುನಿಯಪ್ಪ ಮಾತನಾಡಿ, ಶಾಲೆ ಮತ್ತು ಅಂಗನವಾಡಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಶೌಚಾಲಯ, ಶಾಲಾ ಕಾಂಪೌಂಡ್ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಕೆ ಕೆ ಪಿ ಸುದ್ದಿ 03:
ಕನಕಪುರ ತಾಲೂಕಿನ ತುಂಗಣಿ ಗ್ರಾಪಂನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿದರು.