ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮನ್ವಯತೆ ಅವಶ್ಯ

KannadaprabhaNewsNetwork | Published : Dec 27, 2024 12:48 AM

ಸಾರಾಂಶ

ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರ್ಕಾರದ ವಿವಿಧ ಇಲಾಖೆಗಳು ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವಿದೆ. ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರ್ಕಾರದ ವಿವಿಧ ಇಲಾಖೆಗಳು ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕೆಲಸ ಮಾಡುವ ಅಗತ್ಯವಿದೆ. ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು. ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪಾವಗಡ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಪಾವಗಡ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ಬಾಲ್ಯವಿವಾಹ ಹಾಗೂ ಭ್ರೂಣಹತ್ಯೆ ನಿಷೇಧ, ಬಾಲನ್ಯಾಯ ಕಾಯಿದೆ-2015, ಪೋಕ್ಸೋ ಕಾಯಿದೆ-2012, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಕುರಿತ ತರಬೇತಿ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹಲವಾರು ಸಾಂಸ್ಥಿಕ ವ್ಯವಸ್ಥೆಗಳಿವೆ. ಆದಾಗ್ಯೂ ಮಕ್ಕಳು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುತ್ತಿರುವುದನ್ನು ಗಮನಿಸಿದಲ್ಲಿ ಸದರಿ ವ್ಯವಸ್ಥೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕಾಯಿದೆಗಳ ಅನುಷ್ಠಾನಾಧಿಕಾರಿಗಳಿಗೆ ಮಕ್ಕಳ ಪರವಾದ ಕಾಯಿದೆ ಹಾಗೂ ನಿಯಮಗಳ ಬಗ್ಗೆ ಆಯೋಗ ಸಾಕಷ್ಟು ತರಬೇತಿಗಳನ್ನು ಆಯೋಜಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪಾವಗಡ ತಾಲೂಕು ಪಂಚಾಯ್ತಿ ಕಾರ್ಯಹನಿರ್ವಹಣಾಧಿಕಾರಿ ಜಾನಕಿರಾಮ್ , ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಪಂಚಾಯ್ತಿಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸುತ್ತಿದೆ, ಓದುವ ಬೆಳಕು ಕಾರ್ಯಮಕ್ರಮ ಜಾರಿಗೊಳಿಸಿದೆ, ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳನ್ನು ರಚಿಸಿದೆ ಎಂದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ ಆಶಾರವರು ಪೋಕ್ಸೋ ಹಾಗೂ ಬಾಲ್ಯವಿವಾಹ ಕಾಯಿದೆಗಳ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯದಕ್ರಮದಲ್ಲಿ ಪಾವಗಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್ ಕುಮಾರ್, ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ ಸೇರಿದಂತೆ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಪಾವಗಡ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ಪಿಡಿಒಗಳು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Share this article