ಗೋಕರ್ಣದಲ್ಲಿ ತರಕಾರಿ ಖರೀದಿ ಕೇಂದ್ರ ಉದ್ಘಾಟನೆ

KannadaprabhaNewsNetwork |  
Published : Dec 27, 2024, 12:48 AM IST
ಖರೀದಿ ಕೇಂದ್ರಕ್ಕೆ ಚಾಲನೆ ನೀಡಿರುವುದು  | Kannada Prabha

ಸಾರಾಂಶ

ಗೋಕರ್ಣ ತರಕಾರಿ ಬೆಳೆಗಾರ ರೈತ ಉತ್ಪಾದಕರ ಸಂಘದಿಂದ ತರಕಾರಿ ಖರೀದಿ ಕೇಂದ್ರವನ್ನು ಇಲ್ಲಿನ ಬಿಜ್ಜೂರಿನಲ್ಲಿ ಬುಧವಾರ ಸಂಜೆ ಉದ್ಘಾಟಿಸಲಾಯಿತು. ಈಗಾಗಲೇ ಕಡಮೆ, ಹೊಸ್ಕೇರಿ ಭಾಗದಲ್ಲಿ ಖರೀದಿ ಕೇಂದ್ರ ತೆರೆದಿದ್ದು, ಭಾವಿಕೊಡ್ಲದಲ್ಲೂ ತೆರೆಯಲಿದ್ದೇವೆ ಎಂದು ಸಂಘದ ಸದಸ್ಯ ಕುಮಾರ ಮಾರ್ಕಾಂಡೆ ಹೇಳಿದರು.

ಗೋಕರ್ಣ: ಗೋಕರ್ಣ ತರಕಾರಿ ಬೆಳೆಗಾರ ರೈತ ಉತ್ಪಾದಕರ ಸಂಘದಿಂದ ತರಕಾರಿ ಖರೀದಿ ಕೇಂದ್ರವನ್ನು ಇಲ್ಲಿನ ಬಿಜ್ಜೂರಿನಲ್ಲಿ ಬುಧವಾರ ಸಂಜೆ ಉದ್ಘಾಟಿಸಲಾಯಿತು.

ದೈವಿಕ ಕಾರ್ಯಕ್ರಮ ನೆರವೇರಿಸಿ ಬಳಿಕ ಕೇಂದ್ರದ ನಾಮಫಲಕಕ್ಕೆ ಜನಪ್ರತಿನಿಧಿಗಳು ಹಾಗೂ ರೈತರು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ಖರೀದಿಗೆ ಚಾಲನೆ ನೀಡಿದರು.

ನಂತರ ಬಿಜೆಪಿ ಪ್ರಮುಖ ಹಾಗೂ ಸಂಘದ ಸದಸ್ಯರಾದ ಕುಮಾರ ಮಾರ್ಕಾಂಡೆ ಮಾತನಾಡಿ, ಮೂರು ವರ್ಷಗಳ ಹಿಂದೆ ತರಕಾರಿ ಬೆಳೆಗಾರ ರೈತ ಸಂಘ ರಚನೆಯಾಗಿ ನೋಂದಣಿಗೊಂಡಿದೆ. ಇಲ್ಲಿನ ರೈತರಿಂದ ಯೋಗ್ಯ ದರದಲ್ಲಿ ತರಕಾರಿ ಪಡೆದು ಅವರಿಗೆ ನೆರವಾಗಬೇಕು ಎಂಬುದು ಸಂಘದ ಉದ್ದೇಶವಾಗಿದ್ದು, ಈಗಾಗಲೇ ಕಡಮೆ, ಹೊಸ್ಕೇರಿ ಭಾಗದಲ್ಲಿ ಖರೀದಿ ಕೇಂದ್ರ ತೆರೆದಿದ್ದು, ಭಾವಿಕೊಡ್ಲದಲ್ಲೂ ತೆರೆಯಲಿದ್ದೇವೆ. ಹೀಗೆ ಹೆಚ್ಚು ತರಕಾರಿ ಬೆಳೆಯುವ ಪ್ರದೇಶದಲ್ಲೇ ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗುತ್ತೇವೆ ಎಂದರು. ಅಲ್ಲದೇ ಮುಂದಿನ ದಿನದಲ್ಲಿ ತರಕಾರಿ ಬೆಳೆ ಬೆಳೆಯುವ ರೈತ ಮಹಿಳೆಯರ ಸಮಾವೇಶ ನಡೆಸಿ, ಅಗತ್ಯ ಮಾಹಿತಿ ನೀಡಿ, ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ಗೋಕರ್ಣ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷೆ ಪ್ರಜ್ಞಾ ವಿಠ್ಠಲ ನಾಯ್ಕ, ಮುಖ್ಯ ಕಾರ್ಯದರ್ಶಿ ನಾಗಾರಾಜ ಎಂ. ಗೌಡ, ಆಡಳಿತ ಮಂಡಳಿ ಸದಸ್ಯರಾದ ರಾಜು ಗೌಡ, ಶ್ರೀನಿವಾಸ ನಾಯ್ಕ, ರಾಮಾ ಗೌಡ, ನಾಗವೇಣಿ ಗೌಡ, ನಾಗರಾಜ ಗೌಡ, ಪರಮೇಶ್ವರ ಗೌಡ, ಲಕ್ಷ್ಮೀ ಗೌಡ, ದೀಪಾ ಗಣಪತಿ ನಾಯ್ಕ, ಹನೇಹಳ್ಳಿ ಗ್ರಾಪಂ ಸದಸ್ಯ ಮನೋಹರ ಗೌಡ, ಊರಗೌಡರಾದ ಪ್ರಕಾಶ ಗೌಡ ಹಾಗೂ ರೈತ ಮಹಿಳೆಯರು, ಊರಿನ ಗಣ್ಯರು ಉಪಸ್ಥಿತರಿದ್ದರು.

ಬೆಳೆಗಾರರಿಗೆ ಅನುಕೂಲ: ಗೋಕರ್ಣ ತರಕಾರಿ ಎಂದೇ ಬಹು ಬೇಡಿಕೆಯುಳ್ಳ ಹಾಲಕ್ಕಿ ಒಕ್ಕಲಿಗ ಸಮಾಜದವರು ಸಾಂಪ್ರದಾಯಕ ಕೃಷಿ ಪದ್ಧತಿಯಲ್ಲಿ ಬೆಳೆಯುವ ರುಚಿಕರ ಕಾಯಿಪಲ್ಲೆಗೆ ಯೋಗ್ಯ ದರ ಹಾಗೂ ಸೂಕ್ತ ಖರೀದಿ ಕೇಂದ್ರವಿಲ್ಲದೆ ತೊಂದರೆಯಾಗುತ್ತಿತ್ತು. ರಾತ್ರಿಯಲ್ಲಿ ರಸ್ತೆ ಅಂಚಿನಲ್ಲಿ ರೈತ ಮಹಿಳೆಯರು ತರಕಾರಿಗಳನ್ನು ತಂದು ಹೊರ ಊರಿನವರಿಂದ ಬರುವ ದಲ್ಲಾಗಳಿಗೆ ನೀಡುತ್ತಿದ್ದರು. ಆದರೆ ಈ ಕೇಂದ್ರದಿಂದ ನೇರವಾಗಿ ಮಾರುಕಟ್ಟೆ ದರದೊಂದಿಗೆ ರೈತರಿಂದ ಪಡೆಯುತ್ತಿದ್ದು, ಬೆಳೆಗಾರರಿಗೆ ಅನುಕೂಲವಾಗಲಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ