ಹಳಿಯಾಳ: ಅಧಿಕಾರಿಗಳು ಬಡವರು, ಶೋಷಿತರನ್ನು ಪೀಡಿಸಬಾರದು. ನಿಮ್ಮೊಂದಿಗೆ ವಾದ, ತಕರಾರು ಮಾಡುವಷ್ಟು ಧೈರ್ಯ ಅವರಲ್ಲಿ ಇರಬಹುದು, ಆದರೆ ನಿಮ್ಮ ಪೀಡನೆಯಿಂದ ನೊಂದ ಮನಗಳು ಆಕ್ರಂದಿಸಿ ನೀಡುವ ಶಾಪ ಬಹಳ ಕೆಟ್ಟದ್ದು. ಇದು ನಿಮಗೆ ಅಥವಾ ನಿಮ್ಮ ಮುಂದಿನ ಪೀಳಿಗೆಗೆ ತಟ್ಟದೇ ಇರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ನಿಮ್ಮ ಬಳಿ ಬರುವವರ ಸಮಸ್ಯೆಗಳನ್ನು ಮಾನವೀಯತೆಯ ದೃಷ್ಟಿಯಲ್ಲಿ ಪರಿಹರಿಸಿ. ಇನ್ಮುಂದೆ ನನ್ನ ಕ್ಷೇತ್ರದ ಯಾವುದೇ ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲಿ, ಅನಗತ್ಯವಾಗಿ ಕೊಡುವುದಾಗಲಿ ಕಚೇರಿ ಅಲೆದಾಡಿಸುವ ಕಾರ್ಯವನ್ನು ಮಾಡಿದ ಸುದ್ದಿ ನನ್ನ ಕಿವಿಗೆ ಬೀಳಬಾರದು ಎಂದರು.
ಶಾಸಕರು ಗರಂ: ಅರಣ್ಯ ಇಲಾಖೆಯ ಕೆಲವು ವಲಯ ಅರಣ್ಯಾಧಿಕಾರಿಗಳ ಆಡಳಿತ ಪದ್ಧತಿಯ ಬಗ್ಗೆ ತೀವ್ರ ಗರಂ ಆದ ದೇಶಪಾಂಡೆ ಅವರು, ಅರಣ್ಯ ಇಲಾಖೆಯ ಬಗ್ಗೆ ನನಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಬೇಡಿ ಎಂದು ಮೊದಲೇ ಹೇಳಿದ್ದೇನೆ. ಈಗಲೂ ಅದೇ ಮಾತನ್ನು ಪುನುರುಚ್ಚರಿಸುತ್ತೇನೆ. ಆದರೆ ದಶಕಗಳಿಂದ ಉಳುಮೆ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಹೋಗಬೇಡಿ. ಅಭಿವೃದ್ಧಿ ಕಾರ್ಯಗಳಿಗೆ ಅನಗತ್ಯವಾಗಿ ಪರಿಸರ ನೆಪದಲ್ಲಿ ಕಾಡಿಸಬೇಡಿ ಎಂದು ತಾಕಿತು ಮಾಡಿದರು.ಸ್ವಚ್ಛತೆಗೆ ಆದ್ಯತೆ ನೀಡಿ: ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿವೆ. ಅದಕ್ಕಾಗಿ ಎಲ್ಲ ಗ್ರಾಪಂಗಳು ಮೂರು ದಿನಗಳೊಳಗೆ ಗ್ರಾಮಗಳಲ್ಲಿನ ಚರಂಡಿಗಳನ್ನು ಶುಚಿಗೊಳಿಸಿ, ಘನತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡಿಸಿ ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಮೂಲ ಸೌಲಭ್ಯಗಳಿದ್ದರೂ ಸಣ್ಣಪುಟ್ಟ ಸಮಸ್ಯೆಗಳಿಗೆ ರೋಗಿಗಳನ್ನು ಹುಬ್ಬಳ್ಳಿ- ಧಾರವಾಡಕ್ಕೆ ಕಳಿಸುವುದನ್ನು ನಿಲ್ಲಿಸಬೇಕೆಂದರು.
ಪರಿಹಾರ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಅವರು, ಇಲಾಖೆಯ ಪ್ರಗತಿಯನ್ನು ಮಂಡಿಸಿ ಕಳೆದ ವರ್ಷದ ಬೆಳೆಹಾನಿ ಪರಿಹಾರ ₹14.65 ಕೋಟಿ ಹಾಗೂ ಬೆಳೆವಿಮೆ ₹5.5 ಕೋಟಿಯನ್ನು ರೈತರಿಗೆ ಖಾತೆಗಳಿಗೆ ಜಮಾ ಆಗಿದೆ ಎಂದರು.ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ಹೆಸ್ಕಾಂ, ಶಿಶು ಅಭಿವೃದ್ಧಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮಂಡಿಸಿದರು.
ಹಳಿಯಾಳ ತಾಪಂ ಆಡಳಿತಾಧಿಕಾರಿ ಬಿ.ಎಸ್. ಪಾಟೀಲ, ದಾಂಡೇಲಿ ತಾಲೂಕು ಆಡಳಿತಾಧಿಕಾರಿ ಆಶಾ ಎಂ. ಹಾಗೂ ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್ ಆರ್.ಎಚ್. ಭಾಗವಾನ ಹಾಗೂ ಎಲ್ಲ ಅನುಷ್ಠಾನ ಅಧಿಕಾರಿಗಳು ಇದ್ದರು.