ಬಾಹ್ಯ ಆಡಂಬರದತ್ತ ಗಮನಹರಿಸಬೇಡಿ: ಫ್ರಾನ್ಸಿಸ್ ಮಿರಾಂಡಾ

KannadaprabhaNewsNetwork |  
Published : Dec 26, 2025, 02:30 AM IST
25ಎಚ್.ಎಲ್.ವೈ-1: ಕ್ರಿಸ್ಮಸ್ ನಿಮಿತ್ತ್ಯ ಬುಧವಾರ ಮಧ್ಯರಾತ್ರಿ ಪಟ್ಟಣದ ಮಿಲಾಗ್ರಿಸ್ ಚರ್ಚನಲ್ಲಿ ನಡೆದ ಪೂಜಾವಿಧಿಯಲ್ಲಿ ಕ್ರಿಸ್ತರ ಜನನ ಸಾರಿದ ದ್ಯೋತಕವಾಗಿ ಚರ್ಚ ಗುರು ಪ್ರಾನ್ಸಿಸ್ ಮಿರಾಂಡ ಅವರು ಬಾಲಯೇಸುವಿನ ಮೂರ್ತಿಯನ್ನು  ಚರ್ಚಿನಲ್ಲಿ  ಸಾರ್ವಜನಿಕರಿಗೆ ಪ್ರದರ್ಶಿಸಿದರು.  | Kannada Prabha

ಸಾರಾಂಶ

ಪ್ರಭು ಯೇಸುಕ್ರಿಸ್ತರ ಜನ್ಮದಿನದ ಹಬ್ಬ ಕ್ರಿಸ್‌ಮಸ್‌ನ್ನು ತಾಲೂಕಿನೆಲ್ಲೆಡೆಯಿರುವ ಕ್ರೈಸ್ತ ಧರ್ಮಿಯರು ಗುರುವಾರ ಭಕ್ತಿಶ್ರದ್ಧೆಯಿಂದ ಆಚರಿಸಿದರು. ಹಬ್ಬಕ್ಕಾಗಿ ಸಿದ್ಧಪಡಿಸಿದ ಸಿಹಿತಿಂಡಿ, ಕೇಕನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ತಾಲೂಕಿನೆಲ್ಲೆಡೆ ಭಕ್ತಿಶ್ರದ್ಧೆಯಿಂದ ಹಬ್ಬ ಆಚರಣೆ । ಸಿಹಿತಿಂಡಿ, ಕೇಕ್‌ ಪರಸ್ಪರ ಹಂಚಿಕೊಂಡು ಸಂಭ್ರಮ

ಆಶೀರ್ವಚನ ನೀಡಿದ ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಗುರು

ಕನ್ನಡಪ್ರಭ ವಾರ್ತೆ ಹಳಿಯಾಳ

ಪ್ರಭು ಯೇಸುಕ್ರಿಸ್ತರ ಜನ್ಮದಿನದ ಹಬ್ಬ ಕ್ರಿಸ್‌ಮಸ್‌ನ್ನು ತಾಲೂಕಿನೆಲ್ಲೆಡೆಯಿರುವ ಕ್ರೈಸ್ತ ಧರ್ಮಿಯರು ಗುರುವಾರ ಭಕ್ತಿಶ್ರದ್ಧೆಯಿಂದ ಆಚರಿಸಿದರು. ಹಬ್ಬಕ್ಕಾಗಿ ಸಿದ್ಧಪಡಿಸಿದ ಸಿಹಿತಿಂಡಿ, ಕೇಕನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿರುವ ಕ್ರೈಸ್ತ ದೇವಾಲಯಗಳಲ್ಲಿ ಬುಧವಾರ ಮಧ್ಯರಾತ್ರಿ ಪೂಜಾವಿಧಿಗಳು ಹಾಗೂ ಕ್ರಿಸ್ತ ಜನನದ ಬಗ್ಗೆ ಸ್ಮರಣೆ ನಡೆದವು. ಹಬ್ಬದ ಪೂಜಾವಿಧಿಯ ನಂತರ ಸಮಸ್ತ ಕ್ರೈಸ್ತರು ಒಬ್ಬರನ್ನೊಬ್ಬರನ್ನು ಕೈಕುಲುಕಿಸಿ ಹಬ್ಬದ ಶುಭಾಶಯ ಕೋರಿದರು.ಎಲ್ಲೆಡೆ ಅಲಂಕಾರ:

ಹಬ್ಬದ ನಿಮಿತ್ತ ತಾಲೂಕಿನೆಲ್ಲೆಡೆಯಿರುವ ಚರ್ಚ್‌ಗಳಲ್ಲಿ, ಕ್ರೈಸ್ತರು ನೆಲೆಸಿರುವ ಬಡಾವಣೆಗಳು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಅಲಂಕರಿಸಿದ ಕ್ರಿಸ್‌ಮಸ್‌ ಟ್ರೀಗಳು ಹಾಗೂ ಗೋದಲಿಗಳು ಹಬ್ಬದ ಸಡಗರಕ್ಕೆ ಕಳೆಯನ್ನು ತಂದವು.ಸೈಲೆಂಟ್ ನೈಟ್ ಜೋಗುಳ ಗೀತೆ:

ತಾಲೂಕಿನ ಪ್ರಧಾನ ಚರ್ಚ್‌ಯೆನಿಸಿಕೊಂಡಿರುವ ಹಳಿಯಾಳ ಪಟ್ಟಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಣೆಯು ಬುಧವಾರ ರಾತ್ರಿ ಹನ್ನೊಂದು ಗಂಟೆಗೆ ಆರಂಭಗೊಂಡಿತು. ಮೊದಲಿಗೆ ಕ್ರಿಸ್ತನ ಜನನದ ವೃತಾಂತವನ್ನು ಸಾರುವ ಹಾಡುಗಳ ಗಾಯನವು ನಡೆಯಿತು. ಕ್ರಿಸ್ಮಸ್ ಜೋಗುಳ ಗೀತೆಯೆಂದೇ ಚಿರಪರಿಚಿತ ಐತಿಹಾಸಿಕ ಹಿನ್ನೆಲೆಯುಳ್ಳ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಸೈಲೆಂಟ್ ನೈಟ್ ಗೀತೆಯನ್ನು ಮಿಲಾಗ್ರಿಸ್ ಚರ್ಚ್‌ನ ಗಾಯನ ವೃಂದದವರು ಸುಶ್ರಾವ್ಯವಾಗಿ ಹಾಡಿ ಕ್ರಿಸ್‌ಮಸ್‌ ಗಾಯನಕ್ಕೆ ಚಾಲನೆ ನೀಡಿದರು. ತದನಂತರ ಪಟ್ಟಣದ ವಿವಿಧ ಬಡಾವಣೆಗಳ ನಿವಾಸಿಗಳಿಂದ ಹಾಗೂ ಮಕ್ಕಳ ತಂಡಗಳಿಂದ ಕ್ರಿಸ್ತ ಜಯಂತಿ ಗಾಯನವು ನಡೆಯಿತು. ಗಾಯನದ ನಂತರ ಹಬ್ಬದ ಪೂಜಾವಿಧಿಗಳು ನಡೆದವು.

ಬಾಹ್ಯ ಆಡಂಬರದತ್ತ ಗಮನ ಕೊಡುವ ನಾವುಗಳು ಕ್ರಿಸ್ತರ ಜನನದ ಉದ್ದೇಶವೇನೆಂದು ಅರಿಯಲು ಜಾಣ ಮರೆವನ್ನು ತೋರುತ್ತಾ ಬಂದಿದ್ದೇವೆ ಎಂದು ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಗುರು ಫ್ರಾನ್ಸಿಸ್ ಮಿರಾಂಡಾ ಹೇಳಿದರು.

ಹಬ್ಬದ ಪೂಜಾವಿಧಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕ್ರಿಸ್ತರ ಆಗಮನಕ್ಕೆ ಸಿದ್ಧರಾಗಲು ನಮ್ಮ ಧರ್ಮ ಗ್ರಂಥಗಳು ಸೂಚಿಸಿದ ಕಠೋರವಾದ ಮೈ ಮನ ದಂಡಿಸುವಂತಹ ಆಚಾರ-ವಿಚಾರಗಳನ್ನು ಪಾಲಿಸದೇ, ಸುಲಭ ಹಾಗೂ ಮೈ ಮನಸ್ಸನ್ನು ಅಹ್ಲಾದಿಸುವಂತಹ ವಿಚಾರಗಳನ್ನು ಪಾಲಿಸುತ್ತಾ ಕ್ರಿಸ್‌ಮಸ್‌ ಆಚರಣೆಯ ಮಹತ್ವವನ್ನು ಮರೆತು ಹೋಗಿದ್ದೆವೆ ಎಂದರು. ಕ್ರಿಸ್ತನು ಜನಿಸಿದ ಗೋದಲಿ ಹಾಗೂ ಹಬ್ಬದ ಸಂದರ್ಭದಲ್ಲಿ ಅಲಂಕರಿಸುವ ನಕ್ಷತ್ರ ದೀಪಲಂಕಾರ ಮತ್ತು ಕ್ರಿಸ್‌ಮಸ್‌ ಟ್ರೀಗಳ ಮಹತ್ವವನ್ನು ಅವು ಸಾರುವ ಸಂದೇಶವನ್ನು ಅರಿಯದೇ ಬಾಹ್ಯ ಆಡಂಬರದತ್ತ ಗಮನಹರಿಸಿದರೇ ಯಾವುದೇ ಪ್ರಯೋಜನವಾಗದು ಎಂದರು.

ಹಬ್ಬದ ಪೂಜಾವಿಧಿಯ ನಂತರ ಗೋಧಲಿಯಲ್ಲಿ ಪ್ರತಿಷ್ಠಾಪಿಸಿದ ಬಾಲ ಯೇಸುವಿನ ದರ್ಶನವನ್ನು ಭಕ್ತಾಧಿಗಳು ಪಡೆದರು.

ಎಲ್ಲೆಡೆ ಆಚರಣೆ: ಮಿಲಾಗ್ರಿಸ್ ಚರ್ಚ್‌ ವ್ಯಾಪ್ತಿಗೊಳಪಡುವ ಕೆರವಾಡ, ಕೆಸರೊಳ್ಳಿ ಗ್ರಾಮಗಳ ಪ್ರಾರ್ಥನಾಯಲಗಳಲ್ಲಿ ಕ್ರಿಸ್‌ಮಸ್‌ ಮಧ್ಯರಾತ್ರಿಯ ಪೂಜಾವಿಧಿಗಳು ನಡೆದವು. ತಾಲೂಕಿನ ಯಡೋಗಾ, ಗುಂಡೋಳ್ಳಿ, ಅಂಬಿಕಾನಗರ ಹಾಗೂ ಬುಡಕಟ್ಟು ಸಿದ್ದಿ ಸಮುದಾಯದವರು ನೆಲೆಸಿರುವ ಗರಡೊಳ್ಳಿ, ವಾಡಾ, ಬುಕ್ಕಿನಕೊಪ್ಪ, ಬಾಳಶೆಟ್ಟಿಕೊಪ್ಪ ಮೊದಲಾದೆಡೆ ಪೂಜಾವಿಧಿಗಳು ಹಾಗೂ ಸಂಭ್ರಮಾಚರಣೆ ಜರುಗಿದವು.

ಕೇಕ್ ವಿತರಣೆ:

ಹಬ್ಬದ ಮುನ್ನಾದಿನ ಹಳಿಯಾಳ ಮಿಲಾಗ್ರಿಸ್ ಚರ್ಚ್‌ ಸಲಹಾ ಮಂಡಳಿಯ ನಿಯೋಗವು ಶಾಸಕ ಆರ್.ವಿ. ದೇಶಪಾಂಡೆ ಮತ್ತು ಮಾಜಿ ಶಾಸಕರಾದ ಸುನೀಲ ಹೆಗಡೆ, ಎಸ್.ಎಲ್. ಘೋಟ್ನೇಕರ ಹಾಗೂ ಜನಪ್ರತಿನಿಧಿಗಳ, ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಭೇಟಿ ನೀಡಿ ಕ್ರಿಸ್‌ಮಸ್‌ ಕೇಕ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂದಗಲ್ಲರು ಉತ್ತರ ಕರ್ನಾಟಕದ ಹೆಮ್ಮೆ: ಡಾ. ರೆಹಮತ್ ತರಿಕೆರೆ
ಸೋಲಾರ್ ಪಕ್ಕದ ಜಮೀನಿನಲ್ಲಿ ಬೆಳೆ ಬರುತ್ತಿಲ್ಲ: ರೈತರ ಆರೋಪ