ಜಾನಪದ ಸಂಸ್ಕೃತಿ ಮರೆಯದಿರಿ: ಬಸವಣ್ಣೆಪ್ಪ ಅಟವಾಳಗಿ

KannadaprabhaNewsNetwork | Published : Apr 12, 2025 12:49 AM

ಸಾರಾಂಶ

ಯುವ ಜನಾಂಗಕ್ಕೆ ಜಾನಪದ ಜಾತ್ರೆಗಳ ಮೂಲಕ ನಮ್ಮ ದೇಸಿ ಸಂಸ್ಕೃತಿ, ಸಾಹಿತ್ಯವನ್ನು ಪುನಃ ಕಟ್ಟಿಕೊಡಬೇಕಾಗಿದೆ. ಆ ಮೂಲಕ ಯುವ ಜನಾಂಗವನ್ನು ಸಾಂಸ್ಕೃತಿಕ, ನೈತಿಕವಾಗಿಯೂ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ.

ರಾಣಿಬೆನ್ನೂರು: ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಅದರೊಂದಿಗೆ ನಾವೂ ಓಡುತ್ತಾ ಬಳುವಳಿಯಾಗಿ ಬಂದ ಜಾನಪದ ಸಂಸ್ಕೃತಿಯನ್ನು ಬಿಡುತ್ತಿದ್ದೇವೆ. ಹೀಗೆ ಬಿಡುತ್ತಲೇ ಹೋಗುವುದು ನಮ್ಮ ಮೂಲವನ್ನು ಮರೆತಂತೆ. ಆಗ ನಮಗೆ ಅಸ್ತಿತ್ವವೇ ಇರಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೀರಗಾಸೆ ಕಲಾವಿದ ಬಸವಣ್ಣೆಪ್ಪ ಅಟವಾಳಗಿ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಸಿದ್ಲಿಗಂಪ್ಪ ಬಸಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ- 2025 ಉದ್ಘಾಟಿಸಿ ಮಾತನಾಡಿದರು. ಯುವ ಜನಾಂಗಕ್ಕೆ ಜಾನಪದ ಜಾತ್ರೆಗಳ ಮೂಲಕ ನಮ್ಮ ದೇಸಿ ಸಂಸ್ಕೃತಿ, ಸಾಹಿತ್ಯವನ್ನು ಪುನಃ ಕಟ್ಟಿಕೊಡಬೇಕಾಗಿದೆ. ಆ ಮೂಲಕ ಯುವ ಜನಾಂಗವನ್ನು ಸಾಂಸ್ಕೃತಿಕ, ನೈತಿಕವಾಗಿಯೂ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಆರ್.ಎಫ್. ಅಯ್ಯನಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ, ಭಾವನಾತ್ಮಕವಾಗಿ ಸಂಪೂರ್ಣವಾಗಿ ಬೆರೆಯುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು. ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ಎಸ್.ಪಿ. ಗೌಡರ ಮಾತನಾಡಿ, ನಮಗೆಲ್ಲ ಜನಪದರು ಬಿಟ್ಟು ಹೋಗಿರುವ ಅಗಾಧವಾದ ಸಾಂಸ್ಕೃತಿಕ ಜಗತ್ತು ತಾಯಿಬೇರು. ಆ ಬೇರನ್ನೇ ಮರೆತು ಆಧುನೀಕರಣ, ಜಾಗತೀಕರಣ, ನಗರೀಕರಣದಂತಹ ಈ ತ್ರಿಕರಣಗಳ ಬಲೆಯೊಳಗೆ ಸಿಕ್ಕು ಒದ್ದಾಡುತ್ತಿದ್ದೇವೆ. ಈ ಒದ್ದಾಟದಿಂದ ಹೊರಬರಬೇಕಾದರೆ ನಮ್ಮ ಮೂಲ ಬೇರುಗಳತ್ತ ಹೊರಳಬೇಕಾಗಿದೆ ಎಂದರು.ಗ್ರಾಪಂ ಅಧ್ಯಕ್ಷೆ ಗಂಗಮ್ಮ ಕು. ಗೋಣಿಮಠ, ಕಾಲೇಜು ಅಭಿವೃದ್ಧಿ ಸಮಿತಿಯ ಸೋಮಣ್ಣ ಕೊಟ್ಟದ, ಶಂಕರಗೌಡ ಕುಸಗೂರು, ಮಹಾದೇವಪ್ಪ ನಾರಜ್ಜಿ, ಚನ್ನಬಸಪ್ಪ ನಾಡಿಗೇರ, ಐಕ್ಯುಎಸಿ ಸಂಚಾಲಕ ಪ್ರೊ. ಲೋಹಿಯಾ ಕೆ.ಜೆ.ಆರ್., ಡಾ. ರವಿ ಎಂ., ಗ್ರಂಥಪಾಲಕ ಡಾ. ಹನುಮಂತರಾಜು, ಪ್ರೊ. ರವಿಕುಮಾರ ಎಸ್.ಯು., ಡಾ. ಬಸವರಾಜ ಹುಗ್ಗಿ, ಅಂಬಿಕಾ ಹೊಸಮನಿ, ಡಾ. ನಾಗರಾಜ ಗೋಡಿಹಾಳ, ಕಚೇರಿ ಅಧೀಕ್ಷಕ ಸತೀಶ್ ಎಂ. ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.ರಕ್ತದಾನ ಅತ್ಯಂತ ಪವಿತ್ರ, ಪುಣ್ಯ ಕಾರ್ಯ

ಶಿಗ್ಗಾಂವಿ: ರಕ್ತದಾನ ಅತ್ಯಂತ ಪವಿತ್ರವಾದುದು ಮತ್ತು ಇಂದಿನ ಅಗತ್ಯ. ರಕ್ತದಾನದಿಂದ ಮನುಷ್ಯನಿಗೆ ಧನ್ಯತಾ ಭಾವ ಬರುತ್ತದೆ. ಇನ್ನೊಂದು ಜೀವಕ್ಕೆ ಆಸರೆಯಾಗುವುದರಿಂದ ಪುಣ್ಯವೂ ಲಭಿಸುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಧಿಕಾರಿ ಡಾ. ಬಸವರಾಜ್ ತಳವಾರ ತಿಳಿಸಿದರು.ಪಟ್ಟಣದ ಅಂಕಲಕೋಟಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ರೆಡ್‌ಕ್ರಾಸ್ ಹಾಗೂ ಎನ್‌ಎಸ್‌ಎಸ್ ಘಟಕಗಳ ಅಡಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಸಿ. ವಾಲಿ ಮಾತನಾಡಿ, ದುಡ್ಡು ಮತ್ತು ರಕ್ತ ಎರಡೂ ನಿಲ್ಲಬಾರದು. ಅವೆರಡು ನಿರಂತರ ಚಲಾವಣೆಯಲ್ಲಿ ಇರಬೇಕು. ದುಡ್ಡು ನಿಂತರೆ ಆದಾಯ ತೆರಿಗೆಯವರು ಬರುತ್ತಾರೆ. ರಕ್ತ ನಿಂತರೆ ಆ್ಯಂಬುಲೆನ್ಸ್‌ ಬರುತ್ತದೆ ಎಂದು ತಿಳಿಹಾಸ್ಯದ ಮೂಲಕ ರಕ್ತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ಅಂಬಳಿ ಪಿಳ್ಳೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಎನ್‌ಎಸ್‌ಎಸ್ ಘಟಕ ೧ರ ಅಧಿಕಾರಿ ಡಾ. ಆನಂದ ಇಂದೂರ ಮತ್ತು ಘಟಕ ೨ರ ವಿನಯ್ ಕುಲಕರ್ಣಿ ಹಾಗೂ ಇಮ್ತಿಯಾಜ ಖಾನ್ ಮತ್ತು ಡಾ. ಶೈಲಜಾ ಹುದ್ದಾರ, ರೆಡ್‌ಕ್ರಾಸ್ ಘಟಕದ ಆರ್.ಪಿ. ನದಾಫ್ ಉಪಸ್ಥಿತರಿದ್ದರು. ಡಾ. ಎ.ಎನ್. ರಾಶಿನಕರ್, ಡಾ. ಮುತ್ತು ಸುಣಗಾರ, ಶುಭಾ ಹಿರೇಮಠ್, ಡಿ.ಎಸ್. ಭಟ್, ಡಿ.ಎಸ್. ಸೊಗಲದ ಮುಂತಾದವರು ಉಪಸ್ಥಿತರಿದ್ದರು. ಈ ವೇಳೆ ೪೬ ಯುನಿಟ್ ರಕ್ತ ಸಂಗ್ರಹಿಸಲಾಯಿತು.

Share this article