ಶಿರಹಟ್ಟಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಪ್ರತಿಫಲವಾಗಿ ನಾವಿಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಇವರಲ್ಲಿ ಶಿರಹಟ್ಟಿ ತಾಲೂಕಿನ ಕೋಗನೂರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವೂ ಇದೆ. ಇಂತಹ ಮಹನೀಯರ ಆದರ್ಶ, ಸಿದ್ಧಾಂತ, ತತ್ವಗಳು, ತ್ಯಾಗ ಮನೋಭಾವ, ಗುಣ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಗೌರವಿಸಬೇಕು ಎಂದು ಶರಣಬಸವ ಚನ್ನೂರ ಹೇಳಿದರು.
ವೀರ ಸ್ವಾತಂತ್ರ್ಯ ಹೋರಾಟಗಾರರ ಕರ್ಮಭೂಮಿ ಶಿರಹಟ್ಟಿ ತಾಲೂಕಿನ ಕೋಗನೂರ ಗ್ರಾಮದಲ್ಲಿ ಸೋಮವಾರ ಹುತಾತ್ಮತ್ರಯರ ಬಲಿದಾನ ದಿನ ಆಚರಿಸಿ ಮಾತನಾಡಿದರು.ನಮ್ಮ ಹುತಾತ್ಮ ಮಹಾದೇವ ಮೈಲಾರಪ್ಪ ಅವರ ಗುಂಪಿನಲ್ಲಿ ಕೋಗನೂರ ಗ್ರಾಮದ ೧೮ ಜನ ವೀರ ಸ್ವಾತಂತ್ರ‍್ಯ ಯೋಧರು ಪಾಲ್ಗೊಂಡಿದ್ದರು. ಅವರಲ್ಲಿ ವೀರಯ್ಯ ಹಿರೇಮಠ, ಮಡಿವಾಳ ತಿರಕಪ್ಪನವರು ಮೈಲಾರ ಮಹದೇವಪ್ಪನವರೊಂದಿಗೆ ೧೯೪೩ ಏ. ೧ ರಂದು ಹೊಸರಿತ್ತಿಯಲ್ಲಿ ಬ್ರಿಟೀಷರ ಗುಂಡೇಟಿಗೆ ತಮ್ಮ ದೇಹ ಬಲಿದಾನ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಮತ್ತೋರ್ವ ವೀರಯೋಧ ಗೋಣೆಪ್ಪ ಕಮತರ ತಮ್ಮ ಕೈಬೆರಳುಗಳನ್ನು ಬ್ರಿಟಿಷರ ಗುಂಡು ತಗಲಿ ಕಳೆದುಕೊಂಡಿದ್ದನ್ನು ಸ್ಮರಿಸಿದರು.
ಕೋಗನೂರ ಗ್ರಾಮದ ಹಿರಿಯರಾದ ಎಚ್.ಎಸ್.ಕೆಂಗುಡ್ಡಪ್ಪನವರ ಮಾತನಾಡಿ, ಸ್ವಾತಂತ್ರ ಯೋಧರ ತ್ಯಾಗ ಮತ್ತು ಬಲಿದಾನಗಳು ಮುಂದಿನ ಯುವ ಪೀಳಿಗೆಗೆ ಪ್ರೇರೇಪಣೆಯಾಗಿ ದಾರಿದೀಪವಾಗಲಿ ಎಂದ ಅವರು, ಸ್ವಾತಂತ್ರ‍್ಯ ಯೋಧರ ಕಷ್ಟ ಮೆಲಕು ಹಾಕಿದರು. ಇದೇ ಸಂದರ್ಭದಲ್ಲಿ ವೀರಯೋಧರ ಸಾಧನೆ ಅವರ ಹೆಸರುಗಳು ಅಜರಾಮರವಾಗಿ ಉಳಿಯಲು ಏ.೧ರ ಈ ಬಲಿದಾನ ದಿವಸದ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಸ್ಥಳೀಯ ಗ್ರಾಪಂ,ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಗಳ ಮೂಲಕ ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಹೇಳಿದರು.ಗ್ರಾಮದ ಪ್ರಮುಖ ಬೀದಿಗಳಿಗೆ ವೀರ ಯೋಧರ ಹೆಸರುಗಳನ್ನು ನಾಮಫಲಕಗಳ ಮೂಲಕ ಅನಾವರಣಗೊಳಿಸಬೇಕೆಂದು ಹೇಳಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹುತಾತ್ಮರಾದ ಶ್ರೀ ವೀರಯ್ಯ ಹಿರೇಮಠ ಹಾಗೂ ಮಡಿವಾಳ ತಿರಕಪ್ಪನವರ ಅಮರ ಜ್ಯೋತಿಯನ್ನು ಅವರ ಕುಟುಂಬಸ್ಥರೊಂದಿಗೆ ಸೇರಿ ಮೆರವಣಿಗೆ ಮಾಡಲಾಯಿತು. ಈ ಮೂಲಕ ವೀರ ಸ್ವಾತಂತ್ರ್ಯ ಹೋರಾಟಗಾರಾದ ಗೋಣೆಪ್ಪ ಕಮತ ಇವರ ಗದ್ದುಗೆಗೆ ಪೂಜೆ ಮಾಡಿ ಹುತಾತ್ಮತ್ರಯರ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರು, ಗ್ರಾಮದ ಗುರುಹಿರಿಯರು, ಮುಖಂಡರು, ಯುವಕರು ಸೇರಿಕೊಂಡು ಹುತಾತ್ಮತ್ರಯರ ಮೂರ್ತಿಗಳನ್ನು ಪೂಜೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಿದರು.ವಿಶ್ವಮಾನವ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆವರಗೆರಿ ರುದ್ರಮುನಿ, ಹಂಸಬಾವಿಯ ಸುನೀಲ್ ಮಡಿವಾಳರ್, ಗ್ರಾಮದ ಹಿರಿಯರಾದ ಬಸಪ್ಪ ಡಿಳ್ಳೆಪ್ಪನವರ್, ಪ್ರಕಾಶ್ ಅಂಗಡಿ, ಚೆನ್ನಪ್ಪ ಮಡಿವಾಳರ, ವಿಜಯಾನಂದ ಕಮತ, ಧರ್ಮಗೌಡ ಪಾಟೀಲ್, ಬಸವರಾಜ ಭರಮಣ್ಣನವರ, ಬಸವರಾಜ ಬೂದನೂರ, ಶಂಭುಲಿಂಗ ಹಿರೇಮಠ, ಪುಂಡಲಿಕರೆಡ್ಡಿ ರಡ್ಡೇರ, ಶೇಖಪ್ಪ ಚೂರಿ, ಗುಡದಪ್ಪ ಬ್ಯಾಲಹುಣಸಿ, ಶರೀಫ್ ಪಿಂಜಾರ, ಮಾಲತೇಶ ಕೂರಗುಂದ, ರಮೇಶ ಕೂರಗುಂದ, ರವಿ ಮಟ್ಟಿ, ಸಿದ್ದಾರೂಢ ಚನ್ನೂರ, ಈಶ್ವರ ಮಟ್ಟಿ, ಬಸವರಾಜ ಪೂಜಾರ, ಉಡಚಪ್ಪ ದೊಡ್ಡಮನಿ, ರಾಕೇಶ ಬೂದಿಹಾಳ ಮುಂತಾದವರು ಭಾಗವಹಿಸಿದ್ದರು.