ದಕ್ಷಿಣ ಕನ್ನಡದಲ್ಲಿ ಇನ್ನು ಕೋಮು ಗಲಭೆಗೆ ಆಸ್ಪದ ನೀಡಬೇಡಿ: ಮುಖ್ಯಮಂತ್ರಿ

KannadaprabhaNewsNetwork |  
Published : May 17, 2025, 01:23 AM IST
32 | Kannada Prabha

ಸಾರಾಂಶ

ಮಂಗಳೂರಿನ ಪಡೀಲ್‌ನಲ್ಲಿ 75 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘‘ಪ್ರಜಾಸೌಧ”ವನ್ನು ಶುಕ್ರವಾರ ಉದ್ಘಾಟಿಸಿ, ಪೋಡಿ ಮುಕ್ತ ಅಭಿಯಾನದಲ್ಲಿ 8 ಸಾವಿರಕ್ಕೂ ಅಧಿಕ ಜನರಿಗೆ ಆರ್‌ಟಿಸಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮು ಗಲಭೆ ನಡೆಯಬಾರದು. ಅದಕ್ಕಾಗಿ ಎಲ್ಲ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಮಂಗಳೂರಿನ ಪಡೀಲ್‌ನಲ್ಲಿ 75 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘‘ಪ್ರಜಾಸೌಧ”ವನ್ನು ಶುಕ್ರವಾರ ಉದ್ಘಾಟಿಸಿ, ಪೋಡಿ ಮುಕ್ತ ಅಭಿಯಾನದಲ್ಲಿ 8 ಸಾವಿರಕ್ಕೂ ಅಧಿಕ ಜನರಿಗೆ ಆರ್‌ಟಿಸಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸೌಹಾರ್ದತೆಯ ಪಾಠ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ನಂ.1 ಸ್ಥಾನದಲ್ಲಿದೆ. ಆದರೆ ಇಲ್ಲಿ ಶಾಂತಿ ಸ್ಥಾಪನೆಯ ಅಗತ್ಯವಿದೆ. ಭ್ರಾತೃತ್ವದಿಂದ ಇರುವ ಸಂದೇಶವನ್ನು ಸಂವಿಧಾನವೇ ನೀಡಿದೆ. ಇದರ ಜತೆಗೆ ಸಹಿಷ್ಣುತೆ, ಸಹಬಾಳ್ವೆಯೂ ಇರಬೇಕು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ದ.ಕ. ಜಿಲ್ಲೆ ಶಾಂತಿಯ ತೋಟವಾಗಲಿ. ಸಹಬಾಳ್ವೆಗೆ ಎಲ್ಲ ರಾಜಕಾರಣಿಗಳೂ ಶ್ರಮಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.

ಮನುಷ್ಯ ಮನುಷ್ಯನನ್ನೇ ದ್ವೇಷಿಸುವ ವಾತಾವರಣ ಎಂದೂ ನಿರ್ಮಾಣವಾಗಬಾರದು. ಪರಸ್ಪರ ಪ್ರೀತಿಸುವ, ಸೌಹಾರ್ದತೆಯ ವಾತಾವರಣವನ್ನು ನಿರ್ಮಾಣ ಮಾಡುವುದೇ ರಾಜಕಾರಣಿಗಳ ಕೆಲಸ. ಜತೆಗೆ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸುವ ಕೆಲಸವನ್ನೂ ಮಾಡಬೇಕು ಎಂದು ಕಿವಿಮಾತು ಹೇಳಿದರು. ಸಮಾನತೆಯ ಆಶಯ ಹೊಂದಿರುವ ಸಂವಿಧಾನದ ಶ್ರೇಷ್ಠತೆ ಗೊತ್ತಾಗಬೇಕಾದರೆ ಸಂವಿಧಾನದಲ್ಲಿ ನಂಬಿಕೆ, ಬದ್ಧತೆ ಇರುವವರಿಗೆ ಮಾತ್ರ ಸಾಧ್ಯ ಎಂದೂ ಹೇಳಿದರು.

ತುಳುವಿಗೆ ಅಧಿಕೃತ ಸ್ಥಾನಮಾನ:

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಿಸುವ ಬಗ್ಗೆ ಪ್ರಸ್ತಾಪಿಸಿದ ಸಿಎಂ, ತುಳು ಭಾಷೆಗೆ ಗೌರವ ನೀಡುವ ಕೆಲಸ ಮಾಡುತ್ತೇವೆ. ಆದರೆ ಕನ್ನಡಕ್ಕೆ ಎಂದೂ ಮೊದಲ ಆದ್ಯತೆ ಇರಬೇಕು ಎಂದರು.

ಜನರ ನಿರೀಕ್ಷೆ ಹುಸಿ ಮಾಡಬೇಡಿ:

ಪ್ರಜಾಸೌಧಕ್ಕೆ ಶಿಲಾನ್ಯಾಸ ಮಾಡಿದ್ದೂ ನಾನೇ, ಉದ್ಘಾಟನೆಗೂ ಬಂದಿರೋದು ನನ್ನ ಸೌಭಾಗ್ಯ. ಪ್ರಜಾಸೌಧ ಜನರಿಗಾಗಿ ಮಾಡಿರೋದು. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಅವರ ನಂಬಿಕೆಯನ್ನು ಯಾವ ಅಧಿಕಾರಿಯೂ ಹುಸಿಗೊಳಿಸುವ ಕೆಲಸ ಮಾಡಕೂಡದು ಎಂದು ತಾಕೀತು ಮಾಡಿದರು.

ಅಭಿವೃದ್ಧಿಗೆ ಹಣ ಇಲ್ಲ ಎನ್ನೋದು ಸುಳ್ಳು:

ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವವರು ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ ಎನ್ನುತ್ತಾರೆ. ಕಳೆದ ವರ್ಷ ರಾಜ್ಯದ ಕ್ಯಾಪಿಟಲ್‌ ಎಕ್ಸ್‌ಪೆಂಡಿಚರ್‌ 51 ಸಾವಿರ ಕೋಟಿ ರು. ಇದ್ದದ್ದು ಈ ವರ್ಷ 82 ಸಾವಿರ ಕೋಟಿ ರು.ಗೆ ಏರಿದೆ. ಹಾಗಾಗಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಮಾತಿನಲ್ಲಿ ಯಾವ ಹುರುಳಿಲ್ಲ. ಅದೇ ರೀತಿ ಕಳೆದ ವರ್ಷಕ್ಕಿಂತ ಈ ವರ್ಷ 38 ಸಾವಿರ ಕೋಟಿ ರು.ಗಳಷ್ಟು ಬಜೆಟ್‌ ಗಾತ್ರ ಹೆಚ್ಚಳವಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ಮಾದರಿ ಸರ್ಕಾರವಾಗಿ ರೂಪುಗೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಧುನಿಕ ಮಂಗಳೂರಿಗೆ ಹೆಬ್ಬಾಗಿಲು:

ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ಈಗ ಉದ್ಘಾಟನೆಯಾಗಿರುವ ಪ್ರಜಾಸೌಧ ಕೇವಲ ಕಟ್ಟಡ ಮಾತ್ರವಲ್ಲ, ಆಧುನಿಕ ಮಂಗಳೂರಿಗೆ ತೆರೆದ ಹೆಬ್ಬಾಗಿಲು. ಜಿಲ್ಲೆಯ ಅಭಿವೃದ್ಧಿಯ ಮುಂದಿನ 30-40 ವರ್ಷಗಳ ದೂರದೃಷ್ಟಿಯಿಂದ ಮಾಡಲಾಗಿದೆ. ಉಳ್ಳಾಲ ಕ್ಷೇತ್ರಕ್ಕೂ 1 ಸಾವಿರ ಕೋಟಿ ರು.ಗಳನ್ನು ಸರ್ಕಾರ ನೀಡಿದ್ದು, ಆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಶಾಸಕರಾದ ಅಶೋಕ್‌ ರೈ, ಐವನ್‌ ಡಿಸೋಜ, ಮಂಜುನಾಥ ಭಂಡಾರಿ, ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತಿತರರು ಇದ್ದರು.

ದಕ್ಷಿಣ ಕನ್ನಡ ಸದ್ಯದಲ್ಲೇ ಪೋಡಿಮುಕ್ತ: ಮುಖ್ಯಮಂತ್ರಿ

ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ.‌ ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ.‌ ಇದುವರೆಗೆ ಜನರಿಗೆ ಸರ್ಕಾರದಿಂದ ಮಂಜೂರಾದ ಜಮೀನಿನ ಅಳತೆ, ಆರ್‌ಟಿಸಿ ನೀಡುವ ಕಾರ್ಯ ಆಗಿರಲಿಲ್ಲ. ಇದೀಗ ಅದು ಸಾಕಾರವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ