ಯಕ್ಷಗಾನ ಚೌಕಟ್ಟು, ಸಂಪ್ರದಾಯದ ಎಲ್ಲೆ ಮೀರದಿರಲಿ: ಡಾ.ತಲ್ಲೂರು

KannadaprabhaNewsNetwork | Published : Dec 24, 2024 12:45 AM

ಸಾರಾಂಶ

ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರಸರಂಗ ಸಂಸ್ಥೆ ವತಿಯಿಂದ ಹನುಮದ್ವಿಲಾಸ ಯಕ್ಷಗಾನದ ಪ್ರದರ್ಶನ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ರಸರಂಗ ಸಂಸ್ಥೆ ವತಿಯಿಂದ ಸಾಧಕ ಕಲಾವಿದರಿಗೆ ಗೌರವಾರ್ಪಣೆ

ಕನ್ನಡಪ್ರಭ ವಾರ್ತೆ ಕುಂದಾಪುರ

ಯಕ್ಷಗಾನ ಕಲಾವಿದರು ವೇಷತೊಟ್ಟು ರಂಗಸ್ಥಳಕ್ಕೆ ಬಂದಾಗ ತಾವು ನಿರ್ವಹಿಸುತ್ತಿರುವ ಪಾತ್ರದ ಘನತೆಯ ಬಗ್ಗೆ ಅರಿವಿರಬೇಕು. ಯಕ್ಷಗಾನ ಚೌಕಟ್ಟನ್ನು ಬಿಟ್ಟು ಮಾತಿನ ಎಲ್ಲೆ ಮೀರಬಾರದು. ಹಾಸ್ಯ, ಮನೋರಂಜನೆ ನೆಪದಲ್ಲಿ ಯಕ್ಷಗಾನದ ಘನತೆಯನ್ನು ಕುಂದಿಸಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಭಾನುವಾರ ಇಲ್ಲಿನ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರಸರಂಗ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಹನುಮದ್ವಿಲಾಸ ಯಕ್ಷಗಾನದ ಪ್ರದರ್ಶನ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ನೆರವೇರಿಸಿ ಮಾತನಾಡಿದರು.ಯಕ್ಷಗಾನದ 60 ವರ್ಷ ಮೇಲ್ಪಟ್ಟು ವೃತ್ತಿಪರ ಕಲಾವಿದರು, ನಿವೃತ್ತಿಯಾಗಿರುವ ಕಲಾವಿದರಿಗೆ ಅಕಾಡೆಮಿಯಿಂದ ಗೌರವ ಸಲ್ಲಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅಲ್ಲದೇ ಭವಿಷ್ಯದಲ್ಲಿ ಪ್ರೇಕ್ಷಕರ ಕೊರತೆಯಾಗದಂತೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು ಎನ್ನುವ ಮಹತ್ವಕಾಂಕ್ಷೆ ನಮ್ಮದಾಗಿದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದರೆ ಅವರಲ್ಲಿ ನೈತಿಕ ಮೌಲ್ಯಗಳನ್ನು, ಸಂಸ್ಕಾರವನ್ನು ತುಂಬುವ ಕೆಲಸವೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿ ಯಕ್ಷಗಾನ ಸಂಘಟಕ ಎಚ್. ಜನಾರ್ದನ ಹಂದೆ ಮಾತನಾಡಿ, ಯಕ್ಷಗಾನಕ್ಕೆ ಚಿಟ್ಟಾಣಿ ಅವರ ಮೂಲಕ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕಲಾವಿದರೆಲ್ಲ ಹೆಮ್ಮೆ ಪಡುವಂತಹ ವಿಷಯವಾಗಿದೆ. ನೂರಾರು ಕಲಾವಿದರು ಇಲ್ಲಿ ತಮ್ಮ ಬದುಕನ್ನು ಕಂಡು ಕೊಂಡಿದ್ದಾರೆ. ಹೀಗಾಗಿ ಯಕ್ಷಗಾನವನ್ನು ಪ್ರೋತ್ಸಾಹಿಸುವುದು ಅತೀ ಅಗತ್ಯವಾಗಿದೆ ಎಂದರು.

ರಸರಂಗದ ಮುಖ್ಯಸ್ಥೆ ಸುಧಾ ಮಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಂದಾರ್ತಿ ಮೇಳದ ಮೇಳದ ಹಿರಿಯ ಕಲಾವಿದ ಚಂದ್ರ ಕುಲಾಲ ನೀರ್ಜಿಡ್ಡು ಅವರಿಗೆ ಕಲಾ ಗೌರವ ಸಮರ್ಪಿಸಲಾಯಿತು. ಅಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಉದಯಕುಮಾರ್ ಹೊಸಾಳ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರೇಮಿ ಮೋಹನ್ ಚಂದ್ರ ಉಪಸ್ಥಿತರಿದ್ದರು.ಈ ಸಂದರ್ಭ ಭಾಗವತ ಉದಯಕುಮಾರ್ ಹೊಸಾಳ ಮತ್ತು ಬಳಗದಿಂದ ಹನುಮದ್ವಿಲಾಸ ಎಂಬ ಯಕ್ಷಗಾನ ಪ್ರದರ್ಶನ ಸಭಿಕರ ಮನರಂಜಿಸಿತು. ಸುಧಾ ಮಣೂರು ಕಾರ್ಯಕ್ರಮ ನಿರೂಪಿಸಿದರು.

Share this article