ರೈತರಿಂದ ದೇಶದ ಆರ್ಥಿಕ ಸ್ಥಿತಿ ಸದೃಢ

KannadaprabhaNewsNetwork | Published : Dec 24, 2024 12:45 AM

ಸಾರಾಂಶ

ರೈತರು ಹೆಚ್ಚು ಇಳುವರಿಯ ಜತೆಗೆ ಲಾಭಕ್ಕಾಗಿ ಭೂಮಿಗೆ ಅಪಾರ ಪ್ರಮಾಣದಲ್ಲಿ, ರಸಗೊಬ್ಬರ ಮತ್ತು ಔಷಧಿಯನ್ನು ಬಳಕೆ ಮಾಡುತ್ತಿದ್ದಾರೆ.

ಹೂವಿನಹಡಗಲಿ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿನ ಆರ್ಥಿಕ ಸ್ಥಿತಿ ಸದೃಢತೆಗೆ ರೈತರು ಕಾರಣವಾಗಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆವರಣದಲ್ಲಿ, ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ರೈತರು ಹೆಚ್ಚು ಇಳುವರಿಯ ಜತೆಗೆ ಲಾಭಕ್ಕಾಗಿ ಭೂಮಿಗೆ ಅಪಾರ ಪ್ರಮಾಣದಲ್ಲಿ, ರಸಗೊಬ್ಬರ ಮತ್ತು ಔಷಧಿಯನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಭೂಮಿ ತನ್ನ ಶಕ್ತಿ ಕಳೆದುಕೊಂಡು, ಬಂಜರು ಭೂಮಿಯಾಗುತ್ತಿದೆ. ಭೂಮಿಯ ಆರೋಗ್ಯವನ್ನು ಕಾಪಾಡಲು, ಪ್ರತಿಯೊಬ್ಬ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಭೂಮಿ ಆರೋಗ್ಯ ಕಾಪಾಡುವ ಜತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.

ರೈತರು ಮಳೆ ನಂಬಿಕೊಂಡು ಸಾಲ ಮಾಡಿ ಬಿತ್ತನೆ ಮಾಡುತ್ತಾರೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗದ ಸಂದರ್ಭದಲ್ಲಿ ರೈತ ಎದೆಗುಂದದೇ ತನ್ನ ಕೆಲಸದಲ್ಲಿ ನಿರತನಾಗಿರುತ್ತಾನೆ. ಕೃಷಿಯಲ್ಲಿನ ನಷ್ಟವನ್ನು ತಡೆಯಲು ರೈತರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿ, ವಿವಿಧ ತಂತ್ರಜ್ಞಾನಗಳ ಅಳವಡಿಕೆ, ಸರ್ಕಾರದ ಸೌಲಭ್ಯಗಳ ಕುರಿತು, ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಹೇಳಿದರು.

ರೈತರ ದಿನಾಚರಣೆಯಲ್ಲಿ ಸಾವಯವ ಕೃಷಿಯಿಂದ ಉತ್ಪಾದನೆಯಾಗಿರುವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಿರುವುದು ಉತ್ತಮ ಕೆಲಸವಾಗಿದೆ. ನೂರಾರು ರೈತರು ಮಾಹಿತಿ ಪಡೆದು ಹೆಚ್ಚು ಲಾಭ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.

ತಾಪಂ ಇಒ ಉಮೇಶ ಮಾತನಾಡಿ, ರೈತರು ಕೃಷಿ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಬದು ನಿರ್ಮಾಣ ಮತ್ತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ವಿವಿಧ ಬೆಳೆಗಳನ್ನು ಬೆಳೆಯಲು ನರೇಗಾ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರೈತರು ಹೆಚ್ಚು ನೈಸರ್ಗಿಕ ಕೃಷಿ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.

ಸಹಾಯಕ ಕೃಷಿ ನಿರ್ದೇಶ ಮಹಮದ್‌ ಅಶ್ರಫ್‌ ಮಾತನಾಡಿದರು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಮಂಜುನಾಥ ಭಾನುವಳ್ಳಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೆನ್ನೂರು ಹಾಲೇಶ, ಮುಖಂಡರಾದ ಪುತ್ರೇಶ, ಎಂ.ವಿಶ್ವನಾಥ, ವೀರಸಿಂಗ್‌ ರಾಠೋಡ್‌, ಕೋಡಬಾಳ ಚಂದ್ರಪ್ಪ, ಗಡ್ಡಿ ಗುಡ್ಡಪ್ಪ, ಸತ್ಯಪ್ಪ ರೆಡ್ಡಿ, ಓಲಿ ಈಶಪ್ಪ, ಪಿ.ವಿ.ಬಸವರಾಜ ಸೇರಿದಂತೆ ಇತರರಿದ್ದರು.

ಇದೇ ಸಂದರ್ಭದಲ್ಲಿ 6 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ವಿವಿಧ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.

ವಸ್ತು ಪ್ರದರ್ಶನದಲ್ಲಿ ಹ್ಯಾರಡ ಗ್ರಾಮದ ಸಾವಯವ ಕೃಷಿಕ ಚಕ್ರಸಾಲಿ ಸಂಗಪ್ಪ ಇವರ ಸಾವಯವ ಬೆಲ್ಲ, ಲಿಂಗನಾಯಕನಹಳ್ಳಿಯ ಎಚ್‌.ಎಂ.ವಿಶ್ವನಾಥಯ್ಯ ಇವರ ಹುಳು ಗೊಬ್ಬರ ತಯಾರಿಕೆ, ನಾಗತಿ ಬಸಾಪುರದ ಗಜಾನನ ಮಹಿಳಾ ಸ್ವ ಸಹಾಯ ಸಂಘದ ಗಾಣದ ಎಣ್ಣೆ, ಉತ್ತಂಗಿ ಗ್ರಾಮದ ಕಾಟ್ರಹಳ್ಳಿ ಕಲ್ಲಪ್ಪ ಇವರ ದೇಶಿ ತಳಿಗಳ ಸಂರಕ್ಷಣೆ ಮತ್ತು ಉತ್ಪಾದನೆಯ ಸಾವಯವ ಬೀಜಗಳ ಮಾರಾಟ, ದಾವಣಗೆರೆಯ ಸಮೃದ್ಧಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಅಂಜೂರಾ ರೋಲ್‌, ಹೊಸಹಳ್ಳಿ ರೈತರ ಭತ್ತದ ಸಸಿಗಳ ನಾಟಿ ಪ್ರದರ್ಶನ ನೆರೆದಿದ್ದ ರೈತರ ಗಮನ ಸೆಳೆದವು.

ಸಾವಯವ ವಸ್ತುಗಳಗಳನ್ನು ವೀಕ್ಷಣೆ ಮಾಡಿದ ಶಾಸಕ ಕೃಷ್ಣನಾಯ್ಕ ಬೆಲ್ಲ, ಗಾಣದ ಎಣ್ಣೆ ಮತ್ತು ಸಾವಯವ ನವಣೆ, ಬಿಳಿ ಜೋಳ, ಅಂಜೂರಾ ರೋಲ್‌ಗಳನ್ನು ಖರೀದಿ ಮಾಡಿದರು.

Share this article