ಎಕ್ಕಡಬೈಲಿನಲ್ಲಿ ಆನೆ ದಾಳಿಗೆ ಸಿಕ್ಕಿ ಮೃತಪಟ್ಟ ಎಲಿಯಾಸ್ ಕುಟುಂಬಕ್ಕೆ ₹15 ಲಕ್ಷ ಚೆಕ್ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನಲ್ಲಿ ಆನೆಗಳ ಸಂಚಾರ ಹೆಚ್ಚಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟಾಸ್ಕ್ ಫೋರ್ಸ್ ತಂಡಕ್ಕೆ ಬೇಕಾದ ಅಗತ್ಯ ಪರಿಕರ ಗಳನ್ನು ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಪೂರೈಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲಿನಲ್ಲಿ ಆನೆ ತುಳಿತಕ್ಕೆ ತುತ್ತಾಗಿ ಮೃತರಾದ ಎಲಿಯಾಸ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಸರ್ಕಾರದಿಂದ ₹15 ಲಕ್ಷ ಪರಿಹಾರ ಧನದ ಚೆಕ್‌ನ್ನು ವಿತರಿಸಿ ಮಾತನಾಡಿದರು. ನಾನು ಈ ಘಟನೆ ನಡೆದ ವೇಳೆ ಬೆಳಗಾವಿ ಅಧಿವೇಶನದಲ್ಲಿದ್ದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದು ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಇಂದು ₹15 ಲಕ್ಷ ಚೆಕ್‌ನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದೇನೆ. ನಾನೂ ಕೂಡ ವೈಯಕ್ತಿಕವಾಗಿ ₹1 ಲಕ್ಷ ನೀಡುತ್ತೇನೆ ಎಂದರು.ಆನೆಗಳನ್ನು ಓಡಿಸಲು, ದಾಳಿಗಳನ್ನು ತಪ್ಪಿಸಲು ಸಿಎಂ ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಒತ್ತಡ ಹೇರುತ್ತೇನೆ. ರೈಲ್ವೇ ಬ್ಯಾರಿಕೇಡ್ ಅಳವಡಿಸುವುದು, ಟೆಂಟಕಲ್ ಫೆನ್ಸಿಂಗ್ ಮಾಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಲಾಗುವುದು. ಟಾಸ್ಕ್ ಫೋರ್ಸ್ ತಂಡಕ್ಕೆ ವಾಟರ್ ಬೋಟ್, ವಾಹನದ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಒದಗಿಸಲಾಗುವುದೆಂದರು. ಆನೆಗಳ ಸಂಚಾರವಿರುವ ಕಡೆಯಲ್ಲಿ ಅರಣ್ಯ ಇಲಾಖೆಯವರು ಕೂಡಲೇ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕು. ಆನೆಗಳ ಸಂಚಾರವಿರುವ ಗ್ರಾಮಗಳಲ್ಲಿ ಗ್ರಾಮಸ್ಥರು ಬಹಳಷ್ಟು ಹುಷಾರಾಗಿ ಸಂಚರಿಸಬೇಕು. ಆನೆಗಳನ್ನು ಓಡಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಸಿಎಂ ಕಚೇರಿಯಲ್ಲಿ ಅರಣ್ಯ ಇಲಾಖೆ ಸಚಿವರಾದಿಯಾಗಿ, ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ತಾಲುಕಿನಲ್ಲಿ ನುರಿತ ಟಾಸ್ಕ್ ಫೋರ್ಸ್ ತಂಡವನ್ನು ಶಾಶ್ವತವಾಗಿ ಸ್ಥಾಪಿಸಲು ಪ್ರಸ್ತಾಪ ಸಲ್ಲಿಸಿದ್ದೇನೆ ಎಂದರು.ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ತಾಲೂಕಿನಲ್ಲಿ ಎರಡು ಅವಘಡಗಳು ಸಂಭಸಿವೆ, ಶಾಸಕರು ಕೂಡಲೇ ಆನೆಗಳ ದಾಳಿಯನ್ನು ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳೂ ಕೂಡ ಬಹಳ ಎಚ್ಚರಿಕೆಯಿಂದ ನಿಗಾವಹಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕು. ಸದ್ಯಕ್ಕೆ 62 ಕಿ.ಮೀಗಳಷ್ಟು ಟೆಂಟಕಲ್ ಫೆನ್ಸಿಂಗ್ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಕೆಲವು ಅರಣ್ಯ ಕಾಯ್ದೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರ ತನ್ನ ಕೈಲಾದ ಸೇವೆಗಳನ್ನು ಸಲ್ಲಿಸುತ್ತಿದೆ. ಸಂಸದರೂ ಕೂಡ ಕೇಂದ್ರದಿಂದ ಪರಿಹಾರ ಕೊಡಿಸುವ ಬಗ್ಗೆ ಗಮನಹರಿಸಬೇಕು. ಆನೆಗಳ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದಿಂದಲೂ ಸಹಕಾರ ನೀಡಬೇಕು ಎಂದರು. ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಮಾತನಾಡಿ, ಟಾಸ್ಕ್ ಫೋರ್ಸ್ ತಂಡದ ಸಿಬ್ಬಂದಿಗೆ ಸಂಚರಿಸಲು ಬೊಲೆರೋ ಹಾಗೂ ಕ್ಯಾಂಪರ್ ವಾಹನಗಳು ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ತುರ್ತಾಗಿ ವಾಹನ ಒದಗಿಸಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ವಾಟರ್ ಬೋಟ್‌ಗೆ ಎಷ್ಟು ಹಣ ಬೇಕು ಎಂದು ಕೊಟೇಷನ್‌ನ್ನು ಕೂಡಲೇ ನೀಡಿರಿ. ಕೇಂದ್ರ ಸರ್ಕಾರವೂ ಕೂಡ ನಮ್ಮೆಲ್ಲರ ಸಹಕಾರಕ್ಕೆ ಕೈಜೋಡಿಸಬೇಕು. ಸಂಸದರಿಗೂ ಸಹ ಕೇಂದ್ರದಿಂದ ಸಿಗುವ ಸವಲತ್ತು ಒದಗಿಸುವಂತೆ ಪತ್ರ ಬರೆಯುತ್ತೇನೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಸದಸ್ಯರಾದ ಜುಬೇದಾ, ಮುನಾವರ್ ಪಾಷಾ, ಚರ್ಚ್ ಧರ್ಮಗುರುಗಳಾದ ಫಾ.ಜಾನ್ಸನ್, ಫಾ.ಸನೋಜ್, ಫಾ.ಎಲ್ದೋ, ವಲಯ ಅರಣ್ಯಾಧಿಕಾರಿ ಪ್ರವೀಣ್, ಮುಖಂಡರಾದ ಎಸ್.ಡಿ.ರಾಜೇಂದ್ರ, ಬಿಳಾಲ್ ಮನೆಉಪೇಂದ್ರ, ಈಚಿಕೆರೆ ಸುಂದರೇಶ್, ಜೋಸ್, ಬೆನ್ನಿ, ಎಲ್ದೋ, ಎಂ.ಆರ್.ರವಿಶಂಕರ್, ಮಾಳೂರು ದಿಣ್ಣೆರಮೇಶ್, ಎಲಿಯಾಸ್, ಸೈಯದ್ ಶಫೀರ್‌ಅಹಮ್ಮದ್, ದೇವಂತ್‌ರಾಜ್, ಮುತ್ತಿನಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ನರೇಂದ್ರ, ಸದಸ್ಯ ದೇವಂತ್ ಮತ್ತಿತರರು ಇದ್ದರು.