ಫೆ. 8ರಂದು ನಡೆಯುತ್ತಿರುವ ಬೃಹತ್ ಹಿಂದೂ ಸಮಾವೇಶಕ್ಕೆ ಬ್ಯಾಡಗಿ ಪಟ್ಟಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು ಪಟ್ಟಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
ಬ್ಯಾಡಗಿ: ಫೆ. 8ರಂದು ನಡೆಯುತ್ತಿರುವ ಬೃಹತ್ ಹಿಂದೂ ಸಮಾವೇಶಕ್ಕೆ ಪಟ್ಟಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು ಪಟ್ಟಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
ಪಟ್ಟಣದಲ್ಲಿ ಮೊದಲ ಬಾರಿಗೆ ಹಿಂದೂ ಸಮ್ಮೇಳನ ನಡೆಸಲಾಗುತ್ತಿದ್ದು, ಇದಕ್ಕಾಗಿ ಪಟ್ಟಣದ ನೆಹರು ವೃತ್ತ, ಸುಭಾಷ್ ವೃತ್ತ, ಮೋಟೆಬೆನ್ನೂರ ರಸ್ತೆ, ಹಳೆ ಪುರಸಭೆ ಸೇರಿದಂತೆ ಎಲ್ಲ ವಾರ್ಡ್‌ಗಳಲ್ಲಿ ಕೇಸರಿ ಧ್ವಜ ರಾರಾಜಿಸುತ್ತಿದೆ. ಇದರಿಂದ ಪಟ್ಟಣದ ಸಂಪೂರ್ಣ ಕೇಸರಿಮಯವಾಗಿದ್ದು, ಅಲ್ಲಲ್ಲಿ ಸಮ್ಮೇಳನದ ಬ್ಯಾರನ್ ಕಂಗೊಳಿಸುತ್ತಿವೆ.ಶೋಭಾಯಾತ್ರೆ ಮೆರವಣಿಗೆ: ಸಮಾವೇಶ ಅಂಗವಾಗಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ನೆಹರು ನಗರದ ದಾನಮ್ಮದೇವಿ ದೇವಸ್ಥಾನದಿಂದ ಹಿಂದೂ ಸಮ್ಮೇಳನ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಅಲ್ಲಿಂದ ಮೋಟೆಬೆನ್ನೂರ ರಸ್ತೆ, ಸುಭಾಷ ಸರ್ಕಲ್, ಮುಖ್ಯರಸ್ತೆ, ಹಳೆಯ ಪುರಸಭೆ, ರಟ್ಟಿಹಳ್ಳಿ ರಸ್ತೆ ಮೂಲಕ ತಾಲೂಕು ಕ್ರೀಡಾಂಗಣ ತಲುಪಲಿದೆ. ಶೋಭಾ ಯಾತ್ರೆಯಲ್ಲಿ ಜಾನಪದ ಕಲಾವಿದರ ತಂಡ ಹಿಂದೂ ಧರ್ಮದ ಮಹಾ ಪುರುಷರ ಹಾಗೂ ಮಹಿಳೆಯರ ಭಾವಚಿತ್ರದ ಮೆರವಣಿಗೆ, ನಮ್ಮ ಆಚಾರ, ವಿಚಾರ, ಸಂಪ್ರದಾಯ ಬಿಂಬಿಸುವ ಕಲಾ ತಂಡಗಳು ಹಾಗೂ ಮಕ್ಕಳ ವೇಷಭೂಷಣಗಳು ಇರಲಿವೆ.
ಕ್ರೀಡಾಂಗಣದಲ್ಲಿ ಕಾರ್ಯಕ್ರಮ: ತಾಲೂಕು ಕ್ರೀಡಾಂಗಣದಲ್ಲಿ ಅಂದು ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಗುರುಕುಮಾರೇಶ್ವರ ಪಾಠಶಾಲೆಯ ವೇ. ರಾಚಯ್ಯನವರು ಓದಿಸೋಮಠ ಹಾಗೂ ಮುಪ್ಪಿನೇಶ್ವರ ಮಠದ ಮಾ.ನಿ.ಪ್ರ. ಚೆನ್ನಮಲ್ಲಿಕಾರ್ಜುನ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಜಯಣ್ಣ ಎಸ್. ಶಿರೂರ ವಹಿಸಲಿದ್ದಾರೆ.ಭಾಗವಹಿಸಿ: ಹಿಂದೂ ಸಮ್ಮೇಳನ ನಮ್ಮೆಲ್ಲರ ಕಾರ್ಯಕ್ರಮ, ಆದ್ದರಿಂದ ಎಲ್ಲ ಹಿಂದೂಪರ ಸಂಘಟನೆಗಳು ಎಲ್ಲ ಸಂಘಟನೆಗಳು ಜಾತಿ ಭೇದ ಮರೆತು, ನಾವೆಲ್ಲ ಹಿಂದೂ ಒಂದು ಎಂಬ ಭಾವನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಜಯಣ್ಣ ಶಿರೂರ ಹೇಳಿದರು.ವೇದಗಳ ತವರೂರು ಭಾರತದಲ್ಲಿನ ಹಿಂದೂಗಳಲ್ಲಿ ನಮ್ಮ ಧರ್ಮ, ಪರಂಪರೆ ಹಾಗೂ ಸಂಸ್ಕೃತಿ ಮರೆಯಾಗುತ್ತಿದೆ. ನಮ್ಮ ಸನಾತನ ಧರ್ಮದ ಆಸ್ಮಿತೆಯನ್ನು ಮತ್ತೆ ಬಡಿದೆಬ್ಬಿಸುವ ಸಲುವಾಗಿ ಮತ್ತು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಹಿಂದುತ್ವದ ಧ್ವನಿ ಬಡಿದೆಬ್ಬಿಸಲು ಮಾಡುತ್ತಿರುವ ಸಮಾವೇಶ ಎಂದು ಸಂಚಾಲಕ ಶಿವಯೋಗಿ ಶಿರೂರ ಹೇಳಿದರು.