ರೈತರು ಆದಾಯ ಗಳಿಸಲು ವಾಣಿಜ್ಯ ಬೆಳೆ ಗಳನ್ನು ಬೆಳೆಯಲು ಮುಂದಾಗಬೇಕು. ಜತೆಗೆ ಹೊಸ ತಳಿಯ ಬೆಳೆಗಳನ್ನು ಬೆಳೆದು ಆದಾಯ ದ್ವಿಗುಣ ಮಾಡಿಕೊಳ್ಳುವಂತೆ ಶಾಸಕ ಎನ್‌.ಎಚ್‌. ಕೋನರಡ್ಡಿ ಸಲಹೆ ನೀಡಿದರು.

ಹುಬ್ಬಳ್ಳಿ: ರೈತರು ಆದಾಯ ಗಳಿಸಲು ವಾಣಿಜ್ಯ ಬೆಳೆ ಗಳನ್ನು ಬೆಳೆಯಲು ಮುಂದಾಗಬೇಕು. ಜತೆಗೆ ಹೊಸ ತಳಿಯ ಬೆಳೆಗಳನ್ನು ಬೆಳೆದು ಆದಾಯ ದ್ವಿಗುಣ ಮಾಡಿಕೊಳ್ಳುವಂತೆ ಶಾಸಕ ಎನ್‌.ಎಚ್‌. ಕೋನರಡ್ಡಿ ಸಲಹೆ ನೀಡಿದರು.

ಅವರು ಇಲ್ಲಿನ ಮೂರುಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ರೈತ ಉತ್ಪಾದಕ ಸಂಸ್ಥೆ, ಸಂಶಿ (ಕುಂದಗೋಳ) ಹಾಗೂ ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ 14ನೇ ಒಣ ಮೆಣಸಿನಕಾಯಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ನವಲಗುಂದ, ನರಗುಂದ, ಗದಗ, ಕುಂದಗೋಳ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಬ್ಯಾಡಗಿ ಮೆಣಸಿನಕಾಯಿ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ಹವಾಮಾನ ವೈಪರಿತ್ಯ, ಇಳುವರಿ ಕುಂಠಿತದಿಂದಾಗಿ ಮೆಣಸಿನಕಾಯಿ ಬೆಳೆಯುವಲ್ಲಿ ರೈತರು ಹಿಂದೇಟು ಹಾಕಿದರು. ಈ ಹಿನ್ನೆಲೆಯಲ್ಲಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆ ಕುಂಟಿತವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.

ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಹೊಸ ತಳಿಯ ಬೆಳೆಗಳನ್ನು ಸಂಶೋಧಿಸಿದ್ದಾರೆ. ಹೊಸ ತಳಿಗಳು ರೈತರಿಗೆ ತಲುಪಬೇಕು. ಈ ಕುರಿತು ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಿದೆ. ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವಂತೆ ಅಧಿಕಾರಿಗಳು ರೈತರನ್ನು ಪ್ರೋತ್ಸಾಹಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯಧನ, ಬೆಂಬಲ ಬೆಲೆಯನ್ನು ನೀಡಿದಲ್ಲಿ ರೈತರು ಹೆಚ್ಚಿನ ರೀತಿಯಲ್ಲಿ ಮೆಣಸಿನ ಬೆಳೆ ಬೆಳೆಯಲು ಮುಂದೆ ಬರಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮೆಣಸಿನಕಾಯಿ ಬೆಳೆಗೆ ಉತ್ತಮ‌ ಮಾರುಕಟ್ಟೆ ಕಲ್ಪಿಸಬೇಕಿದೆ. ಒಣ ಮೆಣಸಿನಕಾಯಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡಬೇಕು. ಬ್ಯಾಡಗಿ ಮೆಣಸಿನಕಾಯಿ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕಿದೆ. ವಿವಿ ಆವಿಷ್ಕರಿಸಿದ ಹೊಸ ತಳಿಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವಂತಾಗಲಿ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ, ಪ್ರಧಾನ ವ್ಯವಸ್ಥಾಪಕ ಡಾ. ರಾಮಚಂದ್ರ ಮಡಿವಾಳ, ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕಾಶಿನಾಥ ಭದ್ರಣ್ಣವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜಿತಕುಮಾರ, ಯೋಗೇಶ ಕಿಲಾರಿ, ಉಮೇಶ ಹೆಬಸೂರ ಸೇರಿದಂತೆ ಹಲವರಿದ್ದರು. ಕಾಟಾಚಾರದ ಮೇಳ

ಶುಕ್ರವಾರದಿಂದ 3 ದಿನಗಳ ಕಾಲ ನಡೆಯುವ 14ನೇ ಒಣ ಮೆಣಸಿನಕಾಯಿ ಮೇಳ ಕಾಟಾಚಾರಕ್ಕೆ ಆಯೋಜಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತು. ಕೆಲವು ದಿನಗಳ ಹಿಂದೆ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮೇಳದ ಕುರಿತು ಜಿಲ್ಲೆಯ ಎಲ್ಲ ತಾಲೂಕು, ಗ್ರಾಪಂಗಳಲ್ಲಿ ಭಿತ್ತಿಪತ್ರ, ಬ್ಯಾನರ್‌ಗಳ ಮೂಲಕ ಹಾಗೂ 2 ಸಾವಿರ ಕರಪತ್ರಗಳನ್ನು ಮುದ್ರಿಸಿ ಜಿಲ್ಲೆಯಾದ್ಯಂತ ವಿತರಿಸಿ ಪ್ರಚಾರ ನಡೆಸಲಾಗಿದೆ ಎಂದು ಹೇಳಿದ್ದರು. ಆದರೆ, ಶುಕ್ರವಾರ ನಡೆದ ಮೇಳದ ಚಾಲನೆ ವೇಳೆ ಅಧಿಕಾರಿಗಳನ್ನು ಹೊರತುಪಡಿಸಿದರೆ ಯಾವೊಬ್ಬ ರೈತರು ಕಂಡುಬರಲಿಲ್ಲ. ಹಾಕಿರುವ 100 ಮಳಿಗೆಗಳಲ್ಲಿ ಕೇವಲ 30 ಮಳಿಗೆಗಳು ಮಾತ್ರ ಆರಂಭವಾಗಿರುವುದು ಕಂಡುಬಂದಿತು.