ಓದಿನಲ್ಲಿ ತಲ್ಲೀನರಾಗಿದ್ದರೆ ಕೆಟ್ಟ ಆಲೋಚನೆಗಳು ದೂರ ಉಳಿಯುತ್ತವೆ. ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಂದು ಸುಪ್ತ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು ಎಂದು ರಾಣೆಬೆನ್ನೂರು ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಎಚ್.ಓಂಕಾರನಾಯ್ಕ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಓದಿನಲ್ಲಿ ತಲ್ಲೀನರಾಗಿದ್ದರೆ ಕೆಟ್ಟ ಆಲೋಚನೆಗಳು ದೂರ ಉಳಿಯುತ್ತವೆ. ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಂದು ಸುಪ್ತ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು ಎಂದು ರಾಣೆಬೆನ್ನೂರು ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಎಚ್.ಓಂಕಾರನಾಯ್ಕ್ ಅಭಿಪ್ರಾಯಪಟ್ಟರು.ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಮಾರೋಪ ಸಮಾರಂಭವನ್ನು ಶಾರದಾ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಿರಿಗೆರೆ ನಿಮಗೆ ಅಕ್ಷರ, ಸಂಸ್ಕೃತಿ, ಜ್ಞಾನ ಮತ್ತು ಕಲೆಯ ಬೀಜವನ್ನು ಬಿತ್ತಿದೆ. ಇಂತಹ ಜ್ಞಾನದ ಬೀಜವನ್ನು ಮತ್ತೊಬ್ಬರಲ್ಲಿಯೂ ಬಿತ್ತುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದುವರಿಯಬೇಕು. ಪಂಚೇಂದ್ರಿಯಗಳ ಜೊತೆಗೆ ಮನಸ್ಸನ್ನೂ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸುಸಂಸ್ಕೃತ ವ್ಯಕ್ತಿಗಳಾಗಬಹುದು. ಇಲ್ಲಿ ನಿಮಗೆ ಸಮರ್ಥವಾದ ಶಿಕ್ಷಣ ನೀಡಲಾಗುತ್ತಿದೆ. ಆ ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿಕೊಂಡರೆ ಸಾಧನೆಗೆ ಅದು ಬಲವಾಗುತ್ತದೆ. ಪ್ರಕೃತಿ ಮತ್ತು ಸಂಸ್ಕೃತಿ ನೀಡುವ ಅನುಭವವನ್ನು ವಿಕಸನಗೊಳಿಸಲು ಪ್ರಯತ್ನಿಸಬೇಕು. ಮೊಬೈಲ್ ಗೀಳು ಅಜ್ಞಾನವನ್ನು ಹೆಚ್ಚಿಸುತ್ತಿದ್ದು, ಅದರಿಂದ ದೂರ ಸರಿಯಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಂಗ್ಲಭಾಷಾ ಉಪನ್ಯಾಸಕಿ ಟಿ. ಸಾವಿತ್ರಿ ಮಾತನಾಡಿ, ಕನಸು ಒಂದೆಡೆ, ವಾಸ್ತವ ಮತ್ತೊಂದೆಡೆ. ದೇವರು ನಮಗೆ ಎಲ್ಲವನ್ನೂ ನೀಡಿದ್ದಾನೆ; ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ಏನೂ ಸಾಧನೆ ಮಾಡದವರನ್ನೇ ನಿಜವಾದ ಅಂಗವಿಕಲರು ಎನ್ನಬಹುದು. ಸಿರಿಗೆರೆ ವಿದ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳಾಗಿ ರೂಪಿಸುತ್ತಿದೆ. ನಗರ ಜೀವನದಲ್ಲಿ ಮೊಬೈಲ್ ಗೀಳಿನಿಂದ ಅಧ್ಯಯನ ಕುಂಠಿತವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯ ಕಡೆಗೆ ಸದಾ ಮುಖವಿಟ್ಟು ಪ್ರಯತ್ನಿಸಬೇಕು. ಪ್ರಯತ್ನವಿಲ್ಲದಿದ್ದರೆ ಸಾಧನೆ ಶೂನ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭ ಎರಡೂ ಕಣ್ಣುಗಳಿಲ್ಲದ ವಿದ್ಯಾರ್ಥಿಯೊಬ್ಬನು ಸಾಧನೆಗೈದು ವೈದ್ಯನಾದ ಸ್ಪೂರ್ತಿದಾಯಕ ಕಥಾನಕವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರಾಚಾರ್ಯ ಜಿ. ಸಂತೋಷ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ಅಧ್ಯಾಪಕ ಕಾರ್ಯದರ್ಶಿ ರಾಜಶೇಖರಯ್ಯ ಮಾತನಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎನ್. ಯಶವಂತ್ ಮತ್ತು ಸಹಕಾರ್ಯದರ್ಶಿ ಸಿ. ಸಿಂಧೂ ಹಾಜರಿದ್ದರು.ಲಾವಣ್ಯ ಸಂಗಡಿಗರು ಪ್ರಾರ್ಥಿಸಿದರು. ಎನ್. ಯಶವಂತ್ ಸ್ವಾಗತಿಸಿ, ಪೂಜಾ ವಂದಿಸಿದರು. ಹರ್ಷಿತಾ ಆಂಗ್ಲಭಾಷಾ ಉಪನ್ಯಾಸಕಿ ಸಾಂಸ್ಕೃತಿಕ ವರದಿಯನ್ನು ಮಂಡಿಸಿದರು. ಎನ್. ಪಾಂಡುರಂಗ ವಾರ್ಷಿಕ ವರದಿ ವಾಚಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಥಕ್ ನೃತ್ಯ ಪ್ರದರ್ಶನ ನೀಡಿ ಸಭಿಕರ ಮನಸೆಳೆದರು. ಬಸಮ್ಮ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬೊಧಕ, ಬೋಧಕೇತರ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.