ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸರ್ವ ಸ್ವತಂತ್ರನಾಗಿ ಬದುಕಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ರೈತರ ಏಳ್ಗೆಗೆ ಪೂರಕವಾಗಿ ಕೃಷಿ ಸಂಬಂಧಿತ ಇಲಾಖೆಗಳು ಸಹಕಾರ ನೀಡುತ್ತಿದೆ. ಇಲಾಖೆ ಮೂಲಕ ಸಿಗುವ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಸದೃಢರಾಗಬೇಕು ಎಂದರು.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ಕಡುಬಡತನದ ರೈತ ಕುಟುಂಬದಲ್ಲಿ ಜನಿಸಿ, ನಂತರ ರೈತ ನಾಯಕನಾಗಿ ಬೆಳೆದು ದೇಶದ ಪ್ರಧಾನಿ ಪಟ್ಟಕ್ಕೇರಿದ ಅವರ ನೆನಪಿನಲ್ಲಿ ರೈತ ದಿನ ಆಚರಿಸುತ್ತಿದ್ದೇವೆ ಎಂದರು.ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನ ರೈತರು ರಾಗಿ ಬೆಳೆಯನ್ನೇ ಪ್ರಮುಖ ಕೃಷಿಯನ್ನಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಗಮಂಗಲ ಎಂದರೆ ರಾಗಿಯ ಕಣಜ ಎಂದು ಹೆಸರುವಾಸಿಯಾಗಿದೆ. ರೈತರು ಆಧುನಿಕ ಬೇಸಾಯ ಕ್ರಮಗಳನ್ನು ಆನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಗಿಯನ್ನು ಬೆಳೆಯಬಹುದಾಗಿದೆ ಎಂದರು.
ನಾವು ಸಾಂಪ್ರಾದಾಯಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ರಸಗೊಬ್ಬರದ ಬಳಕೆಯನ್ನು ಮಿತಿಗೊಳಿಸಿ ಸಾವಯವ ಕೃಷಿಯತ್ತ ದಾಪುಗಾಲು ಹಾಕಬೇಕಿದೆ. ತೆಂಗಿನ ತೋಟದಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡರೆ ತೆಂಗಿನ ಫಲ ಹೆಚ್ಚಾಗುವುದಲ್ಲದೆ ಜೇನು ಕೃಷಿಯಿಂದಲೂ ಅಧಿಕ ಲಾಭವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ರೈತ ದಿನಾಚರಣೆಯ ಪ್ರಯುಕ್ತ ರಾಗಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಹಾಗೂ ತೆಂಗಿನ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕಸಲಗೆರೆ ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಸಮಾಜದ ಮಾಜಿ ಉಪಾಧ್ಯಕ್ಷ ಮಹಾಬಲೇಶ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ, ಯುವರಾಜ್, ಕೃಷಿ ಅಧಿಕಾರಿ ರಂಗನಾಥ್, ಇಲಾಖೆಯ ಆತ್ಮ ಸಿಬ್ಬಂದಿ ಕೆ.ಎಸ್. ನಂದಿನಿ, ಎಂ.ಎಲ್.ಧನುಷ, ಅಫ್ಗಾನ ಮುಲ್ಕಿ, ಸಂತೋಷ್, ಎಂ.ಜಿ.ಅಮಿತ್ ಸೇರಿದಂತೆ ರೈತರು ಇದ್ದರು.