ಡೆಂಘೀ ನಿರ್ಲಕ್ಷಿಸದಿರಿ, ಚಿಕಿತ್ಸೆಯಿಂದ ನಿಯಂತ್ರಿಸಿ: ಡಾ.ನಟರಾಜ್

KannadaprabhaNewsNetwork | Published : Jun 28, 2024 12:45 AM

ಸಾರಾಂಶ

ಶಿವಮೊಗ್ಗದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಡೆಂಘೀ ಕುರಿತಾದ ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡೆಂಘೀ ಜ್ವರವು ಮಾರಕ ಕಾಯಿಲೆಯಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆದರೆ ಇದನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಎಸ್. ನಟರಾಜ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಕಚೇರಿ, ತಾಲೂಕು ಆರೋಗ್ಯಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಡೆಂಘೀ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಾಯಿಲೆ ಬಂದರೆ ಅದು ಆರೋಗ್ಯ ಇಲಾಖೆಗೆ ಮಾತ್ರ ಸಂಬಂಧ ಪಟ್ಟಿರುವುದು ಎಂಬ ಮನೋಭಾವ ಬೆಳೆದಿದೆ. ಆದರೆ, ಡೆಂಘೀ, ಮಲೇರಿಯಾ, ಚಿಕುನ್ ಗುನ್ಯ ದಂತಹ ಸೋಂಕಿನ ವಿರುದ್ಧ ಎಲ್ಲರೂ ಸೇರಿ ಹೋರಾಟ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದರು.

ಡೆಂಗ್ಯು ನಿಯಂತ್ರಣದಲ್ಲಿ ನಮ್ಮ ಮುಖ್ಯ ಉದ್ದೇಶ ಲಾರ್ವಾಗಳ ನಿರ್ಮೂಲನೆ ಮಾಡುವುದಾಗಿದೆ. ಇದರಲ್ಲಿ ಶಿಕ್ಷಕರ ಪಾತ ಬಹು ಮುಖ್ಯವಾಗಿದ್ದು, ನೀವು ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಎಂದು ಮನವಿ ಮಾಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ ಸೊಳ್ಳೆ ಉತ್ಪಾದನೆ ನಿಯಂತ್ರಣ ಮಾಡಿದರೆ ಮಾತ್ರ ಡೆಂಗ್ಯೂ ಕಡಿಮೆ ಮಾಡಬಹುದು. ಸೊಳ್ಳೆಗಳು ಕೇವಲ ಚರಂಡಿಯಿಂದ ಮಾತ್ರ ಬರುವುದಿಲ್ಲ ಮನೆಯ ಒಳಗಡೆ ನಿಂತ ಸ್ವಚ್ಛ ನೀರಿನಲ್ಲಿಯೂ ಉತ್ಪಾದನೆ ಆಗುತ್ತದೆ. ಮಕ್ಕಳು ಶಾಲೆಯಲ್ಲಿ ಹೆಚ್ಚು ಕಾಲ ಕಳೆಯುವ ಕಾರಣ ಶಾಲೆಯ ಸುತ್ತ ಮುತ್ತ ಮತ್ತು ನೀರಿನ ಮೂಲಗಳನ್ನು ಸ್ವಚ್ಛ ಮಾಡಬೇಕು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಿ ಸುರಕ್ಷತಾ ಕ್ರಮವಹಿಸಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯಧಿಕಾರಿ ಡಾ.ಜಿ.ಬಿ.ಚಂದ್ರಶೇಖರ್ ಮಾತನಾಡಿ, ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೂನ್ ನಂತರದಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ. ಇಲಾಖೆಗಳ ಸಹಕಾರದಿಂದ ಇದನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಿ ಕೆಲಸ ಮಾಡಬೇಕು ಎಂದರು.

ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಎಚ್.ಕೆ.ಹಸೇನ್ ಸಾಬ್ , ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್. ಕೆ.ಕಿರಣ್ , ಪ್ರೌಢಶಾಲಾ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದರರು ಹಾಜರಿದ್ದರು.

Share this article