-ಕಡಬಗೆರೆಯ ವ್ಯಕ್ತಿ ಗುಣಮುಖ । ಕರ್ಕೇಶ್ವರದ, ಬಾಳೇಹೊನ್ನೂರು, ಕೆಸವೆಯ ಓರ್ವನಿಗೆ ಕೆಎಫ್‌ಡಿ ಪಾಸಿಟಿವ್
------ಕನ್ನಡಪ್ರಭ ವಾರ್ತೆ ಕೊಪ್ಪ
ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ಪರೀಕ್ಷೆಗೊಳಗಾದ ಚಿಕ್ಕಮಗಳೂರಿನ ಕಡಬಗೆರೆಯ ವ್ಯಕ್ತಿ, ನ.ರಾ. ಪುರ ತಾಲೂಕಿನ ಕರ್ಕೇಶ್ವರದ ಓರ್ವ, ಬಾಳೆಹೊನ್ನೂರಿನ ಓರ್ವ, ಕೊಪ್ಪದ ಕೆಸವೆಯ ಓರ್ವರಲ್ಲಿ ಕೆಎಫ್‌ಡಿ ಪಾಸಿಟಿವ್ ಕಂಡು ಬಂದಿದ್ದು, ಕಡಬಗೆರೆಯ ವ್ಯಕ್ತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಬಾಳೆಹೊನ್ನೂರಿನ ವ್ಯಕ್ತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ.ರಾ. ಪುರ ತಾ. ಕರ್ಕೇಶ್ವರದ ವ್ಯಕ್ತಿ ಹಾಗೂ ಕೊಪ್ಪ ಕೆಸವೆಯ ವ್ಯಕ್ತಿ, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಂದ್ರ ಕಿರಿಟಿ ತಿಳಿಸಿದ್ದಾರೆ.
ಕೊಪ್ಪ ಆಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕಿತರಿಗಾಗಿ ವಿಶೇಷ ವಾರ್ಡ್ ತೆರೆಯಲಾಗಿದೆ.ಸುರಕ್ಷತಾ ದೃಷ್ಟಿಯಿಂದ ಕೆಸವೆಯ ೫ ಕಿ.ಮೀ ರೆಡ್ ಜೋನ್ ಎಂದು ಘೋಷಿಸಲಾಗಿದೆ ಎಂದರು. ಸತ್ತ ಮಂಗಗಳ ಮೇಲೆ ಕುಳಿತ ಉಣುಗುಗಳಿಂದ ಕೆಎಫ್‌ಡಿ ಹರಡುತ್ತಿದ್ದು, ಜ್ವರ ಮುಂತಾದ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆಯಬೇಕು. ಆರಂಭಿಕ ಹಂತದಲ್ಲಿ ಚಿಕಿತ್ಸೆಪಡೆಯದೆ ಹೋದಲ್ಲಿ ರೋಗವು ಅಪಾಯಕಾರಿಯಾಗಿ ಪರಿಣಮಿಸಬಹುದು. ಎಲ್ಲಾ ಮಂಗಗಳು ಸತ್ತು ಬಿದ್ದಿದ್ದನ್ನ ಕಂಡ ಕೂಡಲೇ ಆರೋಗ್ಯ ಇಲಾಖೆಯ ಗಮನಕ್ಕೆ ತರತಕ್ಕದೆಂದು ಸೂಚಿಸಲಾಗಿದೆ.
ಕಾಡಿಗೆ ಹೋಗುವ ವೇಳೆ ಜನರು ಮೈಕೈಗೆ ಎಣ್ಣೆ ಹಚ್ಚಿಕೊಂಡು ಉಣುಗು ಕೂರದಂತೆ ಪೂರ್ತಿ ಮುಚ್ಚುವ ಬಟ್ಟೆ ಹಾಕಿಕೊಳ್ಳಬೇಕು. ಬಳಸಿದ ಬಟ್ಟೆಯನ್ನು ಬಿಸಿನೀರಿನಲ್ಲಿ ಮುಳುಗಿಸಿಟ್ಟು ಬಿಸಿನೀರಿನ ಸ್ನಾನ ಮಾಡಬೇಕು. ರೋಗಬರದಂತೆ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸಲು ಮನವಿ ಮಾಡಿದರು.ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಚಕಿತ್ಸೆ ಲಭ್ಯವಿದ್ದು ಕೊಪ್ಪ ತಾಲೂಕು ವಿಶೇಷ ಆಸ್ಪತ್ರೆಯಲ್ಲಿ ಕೆಎಫ್ ಡಿ ವಾರ್ಡ್ ತೆರೆಯಲಾಗಿದೆ. ಮಣಿಪಾಲದ ಕೆ.ಎಂ.ಸಿ.ಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೆಎಫ್‌ಡಿಯ ಉಚಿತ ಚಿಕಿತ್ಸೆ ದೊರೆಯುತ್ತಿದ್ದು ಎಪಿಎಲ್ ಕಾರ್ಡುದಾರರಿಗೆ ಶೇ.೩೦ರ ರಿಯಾಯಿರಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.