ಹಾಸ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದ ಗೋಗೇರೆ

KannadaprabhaNewsNetwork |  
Published : Jan 24, 2025, 12:45 AM IST
22ಡಿಡಬ್ಲೂಡಿ2ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಡಿ. ಗೋಗೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು.  | Kannada Prabha

ಸಾರಾಂಶ

ಗೋಗೇರಿ ಬರೆದ ‘ಚುನಾವಣೆಗೆ ನಿಂತ ನಮ್ಮ ಕಡೆಮನಿ ಹನಮಂತ’ ಎಂಬ ಕವನವು ನಾಡಿನಾದ್ಯಂತ ಸಾಹಿತ್ಯಾಸಕ್ತರ ಮನೆ-ಮನದಲ್ಲಿ ಇನ್ನೂ ಜೀವಂತವಾಗಿದೆ. ಮಾನವೀಯ ಮೌಲ್ಯಗಳಾದ ಸರ್ವಧರ್ಮ ಸಮಾನತೆ, ಸೌಹಾರ್ದತೆ, ಸರ್ವರ ಹಿತರಕ್ಷಣೆ, ಪರೋಪಕಾರ, ನಿರಾಡಂಬರತೆ ಮುಂತಾದ ಜೀವನ ಮೌಲ್ಯಗಳನ್ನು ಜನಮಾನಸದಲ್ಲಿ ತಮ್ಮ ಸಾಹಿತ್ಯದ ಮೂಲಕ ಬಿತ್ತಿದರು.

ಧಾರವಾಡ:

ದಿ. ಎಂ.ಡಿ. ಗೋಗೇರಿಯವರ ಸಾಹಿತ್ಯದಲ್ಲಿ ಹಾಸ್ಯವೇ ಪ್ರಧಾನ ಅಂಶ. ತಮ್ಮ ನವಿರಾದ ಹಾಸ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಅವರ ಸಾಹಿತ್ಯದಲ್ಲಿದೆ ಎಂದು ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಡಿ. ಗೋಗೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ “ಗೋಗೇರಿಯವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು” ಕುರಿತು ಉಪನ್ಯಾಸ ನೀಡಿದ ಅವರು, ಗೋಗೇರಿ ಬರೆದ ‘ಚುನಾವಣೆಗೆ ನಿಂತ ನಮ್ಮ ಕಡೆಮನಿ ಹನಮಂತ’ ಎಂಬ ಕವನವು ನಾಡಿನಾದ್ಯಂತ ಸಾಹಿತ್ಯಾಸಕ್ತರ ಮನೆ-ಮನದಲ್ಲಿ ಇನ್ನೂ ಜೀವಂತವಾಗಿದೆ. ಮಾನವೀಯ ಮೌಲ್ಯಗಳಾದ ಸರ್ವಧರ್ಮ ಸಮಾನತೆ, ಸೌಹಾರ್ದತೆ, ಸರ್ವರ ಹಿತರಕ್ಷಣೆ, ಪರೋಪಕಾರ, ನಿರಾಡಂಬರತೆ ಮುಂತಾದ ಜೀವನ ಮೌಲ್ಯಗಳನ್ನು ಜನಮಾನಸದಲ್ಲಿ ತಮ್ಮ ಸಾಹಿತ್ಯದ ಮೂಲಕ ಬಿತ್ತಿದರು. ಇವು ಬರಿ ಅವರ ಉಪದೇಶಗಳಾಗಿರಲಿಲ್ಲ ಹಾಗೆ ನಡೆದು ತೋರಿಸಿದರು ಎಂದು ಹೇಳಿದರು.

ಪ್ರಾಸಬದ್ಧ:

ಸಾಹಿತಿ ಎ.ಎ. ದರ್ಗಾ ‘ಎಂ.ಡಿ. ಗೋಗೇರಿ ಅವರ ಸಾಹಿತ್ಯದಲ್ಲಿ ಹಾಸ್ಯ-ವಿಡಂಬಣೆ’ ಕುರಿತು ಮಾತನಾಡಿ, ಎಂ.ಡಿ. ಗೋಗೇರಿಯವರ ಸಮಗ್ರ ಸಾಹಿತ್ಯದಲ್ಲಿ ಪ್ರಾಸಬದ್ಧ ಪದ ಪದಪುಂಜಗಳದ್ದೇ ಪ್ರಧಾನ ವಿಷಯ. ಅವರ ವಿರುದ್ಧಾರ್ಥಕ ಪದಗಳಲ್ಲೂ ಮನೋಜ್ಞ ಹಾಸ್ಯವಿತ್ತು. ಸಮಾಜದ ಜ್ವಲಂತ ವಿಷಯಗಳನ್ನೇ ಹಾಸ್ಯದ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ಗೋಗೇರಿ ಸ್ವಸಾಮರ್ಥ್ಯದಿಂದಲೇ ಸಾಹಿತ್ಯದ ಸಾಧಕರಾಗಿದ್ದಾರೆ. ಅವರ ಸಾಹಿತ್ಯದ ತುಂಬಾ ಗ್ರಾಮೀಣ ಬದುಕಿನ ಸಮಗ್ರ ನೈಜ ಚಿತ್ರಣವಿದೆ. ನಾನು ಮಕ್ಕಳ ಸಾಹಿತಿಯಾಗಲು ಅವರದ್ದೇ ಪ್ರೇರಣೆ ಎಂದು ಹೇಳಿದರು.

ದತ್ತಿದಾನಿ ಪರವಾಗಿ ತೌಶೀಫ್ ಗೋಗೇರಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಶಿವು ಬನ್ನೂರ, ಶಾಹೀನಬಾನು ಬಳ್ಳಾರಿ, ಅಕ್ಬರಲಿ ಸೋಲಾಪೂರ, ಶ್ರೀನಿವಾಸ ಪಾಟೀಲ, ಜಯಶ್ರೀ ಪಾಟೀಲ, ಸುಧಾ ಕಬ್ಬೂರ, ಅಶ್ಪಾಕ ಪೀರಜಾದೆ, ಲೈಲಾ. ಜಿ, ಮಧುಮತಿ ಸಣಕಲ್, ರಾಹುಲ್ ಉಪ್ಪಾರ ಕವನ ವಾಚಿಸಿದರು. ಕವನ ವಾಚಿಸಿದ ಕವಿಗಳನ್ನು ಗೌರವಿಸಲಾಯಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು, ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?