ರಾಮನಗರ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ ಅನುಷ್ಠಾನಗೊಳಿಸುವುದು ಹಾಗೂ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಹಾರೋಹಳ್ಳಿಯಿಂದ ರಾಮನಗರದವರೆಗೆ ಬೈಕ್ ರ್ಯಾಲಿ ನಡೆಸಿದರು.
ಹಾರೋಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಸುಮಾರು 250ಕ್ಕೂ ಅಧಿಕ ಮಳಿಗೆಗಳಿವೆ. ಈ ಮಳಿಗೆಗಳಿಗೆ 1991ರಲ್ಲಿ ಹರಾಜು ಪ್ರಕ್ರಿಯೆ ಜರುಗಿದ್ದು ಅಂದು ನಿಗದಿಪಡಿಸಿದ್ದ ಬಾಡಿಗೆಯೇ ಇಂದಿಗೂ ಮುಂದುವರಿಯುತ್ತಿದ್ದು ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಅಲ್ಲದೆ ಅಂದಿನ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮವನ್ನು ಗಾಳಿಗೆ ತೂರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ವಂಚಿಸಲಾಗಿದೆ ಎಂದು ದೂರಿದರು.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು 2023ರ ಜುಲೈ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳು ತಿಂಗಳೊಳಗಾಗಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ, ಕೆಲವು ಪಟ್ಟಭದ್ರರು ಜಿಲ್ಲಾಧಿಕಾರಿಯವರಿಗೆ ತಪ್ಪು ಮಾಹಿತಿ ನೀಡಿ ಹರಾಜು ಪ್ರಕ್ರಿಯೆ ಆರಂಭಿಸಿದರೆ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವುದೆಂದು ದಿಕ್ಕು ತಪ್ಪಿಸಿ ಕೊನೆ ಕ್ಷಣದಲ್ಲಿ ಹರಾಜು ಪ್ರಕ್ರಿಯೆ ರದ್ದುಗೊಳಿಸಿದ್ದಾರೆ ಎಂದು ದೂರಿದರು.ದಲಿತ ಸಂಘಟನೆಗಳು ತಹಸೀಲ್ದಾರ್, ಮುಖ್ಯ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೆಶಕರಿಗೆ ಅನೇಕ ಬಾರಿ ಹಲವು ಮನವಿಗಳನ್ನು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ವಾಸ್ತವವನ್ನು ಅವಲೋಕಿಸಿ ಅತಿ ಶೀಘ್ರದಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಿ ನಿಯಮಾನುಸಾರ ಮೀಸಲಾತಿ ನಿಯಮವನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿ ನಿರತರ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಬಿನೋಯ್ ಮನವಿ ಸ್ವೀಕರಿಸಿ ಜನವರಿ 30ರೊಳಗೆ ಸಭೆ ನಡೆಸಿ ಸಮಸ್ಯೆ ಬಗಹೆರಿಸುವ ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.
23ಕೆಆರ್ ಎಂಎನ್ 2.ಜೆಪಿಜಿ