ಮಳೆಗಾಲ ನಿರ್ಲಕ್ಷಿಸದೇ ಎಚ್ಚರದಿಂದ ಕಾರ್ಯ ನಿರ್ವಹಿಸಿ: ಸಚಿವ ಲಾಡ್‌

KannadaprabhaNewsNetwork |  
Published : May 27, 2025, 11:48 PM IST
27ಡಿಡಬ್ಲೂಡಿ1,2ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಜರುಗಿಸಿದರು.  | Kannada Prabha

ಸಾರಾಂಶ

ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಿಂದ ತುಂಬಿ ಹರಿಯುತ್ತಿದ್ದು, ಯಾವುದೇ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಬೀಳದ ಹಾಗೆ ಎಚ್ಚರವಹಿಸಿ ಯಾವುದೇ ಜೀವ ಹಾನಿ ಆಗದಂತೆ ನಿಗಾ ವಹಿಸಬೇಕು.

ಧಾರವಾಡ: ಬೆಣ್ಣಿ ಮತ್ತು ತುಪ್ಪರಿ ಹಳ್ಳದ ಅಂಚಿನಲ್ಲಿರುವ ಗ್ರಾಮಗಳಲ್ಲಿ ರಾತ್ರಿ ವೇಳೆ ಪ್ರವಾಹ, ಅತಿವೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಕ್ರಮ ವಹಿಸಬೇಕು. ಜತೆಗೆ ಅಧಿಕಾರಿಗಳು ಮಳೆಗಾಲ ನಿರ್ಲಕ್ಷಿಸದೇ ಎಚ್ಚರದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ನೀಡಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಿಂದ ತುಂಬಿ ಹರಿಯುತ್ತಿದ್ದು, ಯಾವುದೇ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಬೀಳದ ಹಾಗೆ ಎಚ್ಚರವಹಿಸಿ ಯಾವುದೇ ಜೀವ ಹಾನಿ ಆಗದಂತೆ ನಿಗಾ ವಹಿಸಬೇಕು. ಕೋವಿಡ್ ಬಂದಿರುವುದರಿಂದ ಮುನ್ನೆಚ್ಚರಿಕೆ ವಹಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಮುಂಗಾರು ಬಿತ್ತನೆ ಆರಂಭವಾಗಿದ್ದು, ರೈತರು ಹೊಲಗಳಿಗೆ ಹೋಗಲು ಕಾಲುದಾರಿ, ಮಣ್ಣಿನ ರಸ್ತೆ ಸುಧಾರಿಸಬೇಕು. ತಕ್ಷಣ ದುರಸ್ತಿಗೆ ಕ್ರಮವಹಿಸಲು ತಿಳಿಸಿದ ಅವರು, ಎಲ್ಲ ಇಓಗಳು ತಮ್ಮ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗದಂತೆ ಅಗತ್ಯ ಕ್ರಮ ವಹಿಸಬೇಕು. ಶಾಲಾ ಕೊಠಡಿಗಳು ಸೋರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಸಕ್ತ ಸಾಲಿಗೆ ಸಮೀಕ್ಷೆ ಮಾಡಿದಾಗ ವಿವಿಧ ಶಾಲೆಗಳ ಸುಮಾರು 62 ಕೊಠಡಿಗಳು ಸೋರುತ್ತಿವೆ. ಇವುಗಳ ತುರ್ತು ದುರಸ್ತಿಗೆ ಕ್ರಮವಹಿಸಬೇಕು. ಶಾಲೆಗಳು ಆರಂಭವಾಗುವ ಪೂರ್ವದಲ್ಲಿ ಶಾಲಾ ಕೊಠಡಿಗಳು ರಿಪೇರಿ ಆಗಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 42 ಅಂಗನವಾಡಿಗಳು ದುರಸ್ತಿ ಆಗಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಮುದಾಯ ಭವನ, ಸರ್ಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯುತ್ ಕಂಬಗಳು ವಾಲದಂತೆ ಹಾಗೂ ಬೀಳದಂತೆ ಮುಂಜಾಗೃತೆ ವಹಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯವಿರುವ ರಸಗೊಬ್ಬರ, ಬೀಜ ಹಾಗೂ ಕಳೆ ನಿಯಂತ್ರಕ ಔಷಧಿಗಳನ್ನು ವಿತರಿಸಬೇಕು. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ರೈತರಿಗೆ ನೀಡಬೇಕು. ಖಾಸಗಿ ಅಂಗಡಿಗಳು ನಿಯಮಾನುಸಾರ ಬೀಜ, ಗೊಬ್ಬರಗಳನ್ನು ಮಾರಾಟ ಮಾಡಬೇಕೆಂದು ಸಚಿವರು ನಿರ್ದೇಶಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮೇ 22 ರಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಲಘಟಗಿ ಮತ್ತು ಧಾರವಾಡ ಭಾಗಗಳಲ್ಲಿ ಹೆಚ್ಚು ಹಾನಿಯಾಗಿದೆ. ವಾಡಿಕೆಯ 105 ಮಿ.ಮೀ ಬದಲು 217 ಮಿ.ಮೀ. ಮಳೆಯಾಗಿದೆ. ಪೂರ್ವ ಮುಂಗಾರಿನಿಂದ ಧಾರವಾಡ ತಾಲೂಕು ಮತ್ತು ಕುಂದಗೋಳ ತಾಲೂಕಿನಲ್ಲಿ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದು, ಪರಿಹಾರ ನೀಡಲಾಗಿದೆ. ಮೇ 26ರ ವರೆಗೆ ನಾಲ್ಕು ಜಾನುವಾರುಗಳು ಸಾವನ್ನಪ್ಪಿದ್ದು, ಅದರಲ್ಲಿ ಕಲಘಟಗಿ 2, ಧಾರವಾಡ 1, ಅಣ್ಣಿಗೇರಿಯಲ್ಲಿ 1 ಜಾನುವಾರಗಳಿಗೆ ಪರಿಹಾರವಾಗಿ ₹37500 ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 20 ಮನೆಗಳು ಭಾಗಶಃ ಹಾನಿಯಾಗಿದ್ದು, ಹಾನಿಯಾದ ಮನೆಗಳಿಗೆ ತಲಾ ₹6,500 ಪರಿಹಾರ ನೀಡಲಾಗಿದೆ ಎಂದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಹಲವರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’