ಮಹಿಳಾ ಕಾರ್ಮಿಕರು ಸಂಘಟಿತರಾಗಲಿ: ನ್ಯಾಯಾಧೀಶ ರಾಜೇಶ

KannadaprabhaNewsNetwork |  
Published : May 27, 2025, 11:47 PM IST
ಬಳ್ಳಾರಿಯ ಬಿಡಿಎಸ್ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಅವರು ಪಾಲ್ಗೊಂಡು ಮಾತನಾಡಿದರು.  | Kannada Prabha

ಸಾರಾಂಶ

ಜೀನ್ಸ್ ಗಾರ್ಮೆಂಟ್ ಕಾರ್ಮಿಕರು ಜಾಗೃತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು.

ಬಳ್ಳಾರಿ ಬಿಡಿಎಸ್ ತರಬೇತಿ ಕೇಂದ್ರದಲ್ಲಿ ಕಾರ್ಮಿಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜೀನ್ಸ್ ಗಾರ್ಮೆಂಟ್ ಕಾರ್ಮಿಕರು ಜಾಗೃತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್. ಹೊಸಮನೆ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೀನ್ಸ್ ಗಾರ್ಮೆಂಟ್ ಕಮ್ಯೂನಿಟಿ ಡೆವೆಲಪ್‌ಮೆಂಟ್ ಅಸೋಸಿಯೇಷನ್, ರೀಚ್ ಸಂಸ್ಥೆ, ಕಾನೂನು ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಮಕ್ಕಳ ಮತ್ತು ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಎಸ್ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 8 ಗಂಟೆಗಳ ದುಡಿಮೆಗಾಗಿ ನಡೆದ ಕಾರ್ಮಿಕರ ಹೋರಾಟದ ಭಾಗವಾಗಿ ಈಗ ಜಗತ್ತಿನಾದ್ಯಂತ 194 ರಾಷ್ಟ್ರಗಳಲ್ಲಿ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕಾರ್ಮಿಕರಿಗೆ ಗೌರವಯುತ ಬದುಕು ನೀಡಲು, ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಹಕ್ಕುಗಳನ್ನು ಜಾರಿಗೆ ತರಲಾಯಿತು. ನಮ್ಮ ದೇಶದ ಸಂವಿಧಾನದಡಿ ಕಾರ್ಮಿಕರಿಗೆ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನ ಕಾಯಿದೆ, ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನವಾಗಿ ದುಡಿಯುತ್ತಿದ್ದಾರೆ. ಮಹಿಳೆ ಕಾರ್ಮಿಕರು ಮಾನಸಿಕವಾಗಿ ಹೆಚ್ಚು ಸದೃಢರಾಗಿದ್ದು, ಬಲಿಷ್ಠರಾಗುವ ಮೂಲಕ ಅಸಂಘಟಿತ ವಲಯದಲ್ಲಿನ ಮಹಿಳಾ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಮಹಿಳಾ ಕಾರ್ಮಿಕರು, ವಿಶೇಷವಾಗಿ ಜೀನ್ಸ್ ಗಾರ್ಮೆಂಟ್‌ಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣೆಯಾಗಿ ಸರ್ಕಾರದ ಸೌಲಭ್ಯ ಪಡೆಯಲು ಜಾಗ್ರತರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ ಮಾತನಾಡಿ, ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದಲ್ಲಿ ದುಡಿಯುವವರಿಗಾಗಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಿದೆ. ಈ ಮಂಡಳಿಯಲ್ಲಿ ನೋಂದಣಿಯಾಗುವ ಕಾರ್ಮಿಕರಿಗೆ ಇಲಾಖೆಯು ಹಲವಾರು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುತ್ತದೆ ಎಂದು ತಿಳಿಸಿದರು.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅಸಂಘಟಿತ ವಲಯಗಳಲ್ಲಿ ಬರುವ ಟೈಲರಿಂಗ್ ಮಾಡುವ ಕಾರ್ಮಿಕರು ನೋಂದಣಿಯಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದು ತಿಳಿಸಿದ ಅವರು, ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮೌನೇಶ್ ಮಾತನಾಡಿ, ಕೈಗಾರಿಕೆಗಳು ಸೇರಿದಂತೆ ಜೀನ್ಸ್ ಉತ್ಪಾದನಾ ಯೂನಿಟ್‌ಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಾನೂನು ಅಪರಾಧವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರಾನ್ನಾಗಿಸಬೇಕು. 14 ವಯಸ್ಸಿನ ಮಕ್ಕಳಿಗೆ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವಂತೆ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಅವರು ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಗಾರ್ಮೆಂಟ್ ಮಹಿಳಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೋಂದಣಿಯಾದವರಿಗೆ ಟೈಲರಿಂಗ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ರೀಚ್ ಸಂಸ್ಥೆಯ ಜಿ.ಎನ್. ಸಿಂಹ, ಜೀನ್ಸ್ ಗಾರ್ಮೆಂಟ್ ಕಮ್ಯೂನಿಟಿ ಡೆವೆಲಪ್‌ಮೆಂಟ್ ಅಸೋಸಿಯೇಷನ್‌ನ ಅಧ್ಯಕ್ಷೆ ಸುನೀತಾ, ಅಸೋಸಿಯೇಷನ್ ಪದಾಧಿಕಾರಿಗಳಾದ ಜಾನ್ ಸುಧಾಕರ್, ರೆಹಮಾನ್, ಸತ್ಯನಾರಾಯಣ, ಗೌಷ್, ರೀಚ್ ಸಂಸ್ಥೆಯ ಜಿಲ್ಲಾ ಸಂಯೋಜಕ ಹನುಮಂತಪ್ಪ, ಪದಾಧಿಕಾರಿಗಳಾದ ಲಕ್ಷ್ಮೀದೇವಿ, ಬಸಮ್ಮ, ಡಾ. ಎರ‍್ರಿಸ್ವಾಮಿ ಎಚ್‌. ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''