ಮೈಸೂರು: ಹುಣಸೂರು ತಾಲೂಕಿನ ವೀರನಹೊಸಳ್ಳಿ ಸಮೀಪದ ನಾಗಾಪುರ ಹಾಡಿಯಲ್ಲಿ ಯುವಕನ ಮೇಲೆ ದಾಳಿ ನಡೆಸಿ ಸಾಯಿಸಿರುವುದು ಹುಲಿಯಲ್ಲ, ಚಿರತೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ನಾಗಾಪುರ ಹಾಡಿ ೫ನೇ ಬ್ಲಾಕ್ ನಿವಾಸಿ ಹರೀಶ್ (29) ಸೋಮವಾರ ಸೊಳ್ಳೇಪುರ ಅರಣ್ಯ ಪ್ರದೇಶದಂಚಿನ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದಾಗ ಕಾಡು ಪ್ರಾಣಿ ದಾಳಿ ನಡೆಸಿತ್ತು. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಹರೀಶ್ ಮೇಲೆ ಹುಲಿ ದಾಳಿ ನಡೆಸಿದೆ ಎಂದಿದ್ದರು. ಆದರೆ, ಅರಣ್ಯ ಇಲಾಖೆಯವರು ಮಾತ್ರ ಯುವಕನ ಮೇಲೆ ದಾಳಿ ನಡೆಸಿರುವುದು ಚಿರತೆ ಎಂದು ತಿಳಿಸಿದ್ದಾರೆ.
ಯುವಕನ ಮೃತದೇಹ ಪತ್ತೆಯಾದ ಸ್ಥಳದ ಸುತ್ತಮುತ್ತ ಡ್ರೋನ್ ಮೂಲಕ ಪರಿಶೀಲಿಸಿ, ಆನೆ ಮತ್ತು ಚಿರತೆ ಕಾರ್ಯಪಡೆ, ನಾಗರಹೊಳೆ, ಹುಣಸೂರು ವಲಯದ ಸಿಬ್ಬಂದಿಯೊಂದಿಗೆ ಎರಡು ಸಾಕಾನೆ ಬಳಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಯಾಚರಣೆ ನಡೆಸಲಾಗಿದೆ.ಅಲ್ಲದೆ, ಚಿರತೆ ಸೆರೆಗಾಗಿ ಒಂದು ದೊಡ್ಡ ಬೋನ್, 4 ಚಿಕ್ಕ ಬೋನ್ ಅಳವಡಿಸಲಾಗಿದೆ. 15 ಕ್ಯಾಮರಾ ಟ್ರ್ಯಾಪ್ ಅಳವಡಿಸಿ, ಯುವಕನ ಮೃತದೇಹ ಸಿಕ್ಕ ಪ್ರದೇಶದ ಸುತ್ತಮುತ್ತ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಪಿ.ಎ. ಸೀಮಾ, ಎಸಿಎಫ್ ಲಕ್ಷ್ಮೀಕಾಂತ್ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.