ಒಂದೇ ಮಳೆಗೆ ಹಂಪಿ ಮಾನ ಹರಾಜು

KannadaprabhaNewsNetwork | Published : May 27, 2025 11:46 PM
ಒಂದೇ ಒಂದು ಮಳೆ ವಿಶ್ವ ವಿಖ್ಯಾತ ಹಂಪಿ ಮಾನ ಹರಾಜು ಹಾಕಿದೆ.
Follow Us

ಕೆಸರುಮಯ ರಸ್ತೆಯಲ್ಲೇ ಬ್ಯಾಟರಿ ಚಾಲಿತ ವಾಹನಗಳ ಓಡಾಟ! । ರಸ್ತೆ ದುರಸ್ತಿಗೆ ಒತ್ತಾಯಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಒಂದೇ ಒಂದು ಮಳೆ ವಿಶ್ವ ವಿಖ್ಯಾತ ಹಂಪಿ ಮಾನ ಹರಾಜು ಹಾಕಿದೆ. ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದವರೆಗೆ ಕಚ್ಚಾ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೆಸರುಮಯ ರಸ್ತೆಯಲ್ಲೇ ಬ್ಯಾಟರಿ ಚಾಲಿತ ವಾಹನಗಳು ಓಡಾಡುತ್ತಿವೆ! ಹಂಪಿಗೆ ದೇಶ, ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಯಲ್ಲಿ ಬೇರೆ ವಾಹನಗಳನ್ನು ಬಿಡಲಾಗುವುದಿಲ್ಲ. ಆದರೆ, ಈ ಮಣ್ಣಿನ ರಸ್ತೆಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ದುರಸ್ತಿ ಮಾಡಬೇಕಾದ ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಜಾಣ ಕುರುಡತನ ಪ್ರದರ್ಶಿಸಿದ ಫಲವಾಗಿ ಒಂದೇ ಮಳೆಗೆ ಇಡೀ ಹಂಪಿ ಮಾನ ಹರಾಜಾಗಿದೆ.

11 ಬ್ಯಾಟರಿ ಚಾಲಿತ ವಾಹನ ಓಡಾಟ:

ಹಂಪಿಯಲ್ಲಿ 25 ಬ್ಯಾಟರಿ ಚಾಲಿತ ವಾಹನಗಳ ಪೈಕಿ ಈಗ 11 ವಾಹನಗಳು ನಿತ್ಯ ಓಡಾಟ ನಡೆಸುತ್ತಿವೆ. ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದವರೆಗೆ 2 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೆಸರುಮಯವಾಗಿದೆ. ಈ ಮಣ್ಣಿನ ರಸ್ತೆಯಲ್ಲಿ 20ಕ್ಕೂ ಅಧಿಕ ಕಡೆ ತಗ್ಗು ಬಿದ್ದಿದೆ. ಈ ತಗ್ಗಿನಲ್ಲಿ ಮಳೆ ನೀರು ನಿಂತಿದೆ. ಈ ರಸ್ತೆಯಲ್ಲೇ ಈಗ ಬ್ಯಾಟರಿ ಚಾಲಿತ ವಾಹನಗಳು ಓಡಾಟ ನಡೆಸಿದ್ದು, ಈ ವಾಹನಗಳು ಕೂಡ ಈಗ ರಿಪೇರಿ ಬರುತ್ತಿವೆ.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದ ರಸ್ತೆಯನ್ನು ಜಿ-20 ಶೃಂಗಸಭೆ ವೇಳೆ ದುರಸ್ತಿ ಮಾಡಲಾಗಿತ್ತು. ಆ ಬಳಿಕ ಮೇಲ್ಮಟ್ಟದಲ್ಲಿ ಮಾತ್ರ ದುರಸ್ತಿ ಮಾಡಲಾಗಿದೆ. ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ದುರಸ್ತಿ ಮಾಡಿದ್ದರೆ, ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಹಂಪಿ ಉತ್ಸವದ ವೇಳೆಯಲ್ಲೇ ಈ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿದ್ದರೆ, ಈಗ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ಕನ್ನಡಪ್ರಭದ ಬಳಿ ಅಳಲು ತೋಡಿಕೊಂಡರು.

ದೇಶ, ವಿದೇಶಿ ಪ್ರವಾಸಿಗರು:

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ಆನೆಲಾಯ, ಕಮಲ ಮಹಲ್‌ ಮತ್ತು ರಾಣಿ ಸ್ನಾನ ಗೃಹ ವೀಕ್ಷಣೆ ಬಳಿಕ ಕಲ್ಲಿನ ತೇರು ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ವಿಜಯ ವಿಠಲ ದೇವಾಲಯದ ಸಪ್ತ ಸ್ವರ ಮಂಟಪ, ಮದುವೆ ಮಂಟಪ ಸೇರಿದಂತೆ ರಾಜರ ತುಲಾಭಾರ ಮತ್ತು ಪುರಂದರ ದಾಸರ ಮಂಟಪಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈಗ ಬ್ಯಾಟರಿ ಚಾಲಿತ ವಾಹನಗಳ ಓಡಾಟಕ್ಕೆ ಸರಿಯಾಗಿ ರಸ್ತೆ ಇಲ್ಲದಂತಾಗಿದೆ. ಇನ್ನೊಂದು ದೊಡ್ಡ ಮಳೆ ಬಂದರೆ, ಬ್ಯಾಟರಿ ಚಾಲಿತ ವಾಹನಗಳ ಓಡಾಟವನ್ನೂ ಬಂದ್‌ ಮಾಡುವ ಸ್ಥಿತಿ ಬಂದೊದಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ವಾರ್ಷಿಕ 40 ಲಕ್ಷ ದೇಶಿ ಪ್ರವಾಸಿಗರು ಹಾಗೂ 3 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಹಂಪಿ ಸ್ಮಾರಕಗಳ ಸಂರಕ್ಷಣೆಗೂ ಸರ್ಕಾರಗಳು ಒತ್ತು ನೀಡಿವೆ. ಆದರೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ದೂರಿದ್ದಾರೆ.