ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ 1986ರ ಡಿ.24 ರಂದು ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂತು. ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಪ್ರತಿ ವರ್ಷವೂ ಒಂದು ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಮಾಡುವ ಪದ್ಧತಿ ಇದೆ. ಡಿಜಿಟಲ್ ನ್ಯಾಯದ ಮುಖಾಂತರ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿ ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ. ಗ್ರಾಹಕರ ರಕ್ಷಣಾ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.
ನಾವು ಯಾವುದಾದರೂ ಒಂದು ವಸ್ತುವನ್ನು ಕೊಂಡಾಗ ಅದಕ್ಕೆ ಸಂಬಂಧಿಸಿದಂತೆ ರಸೀದಿಯನ್ನು ಪಡೆಯುತ್ತೇವೆ. ರಸೀದಿ ಪಡೆದುಕೊಳ್ಳುವುದರಿಂದ ಇಂತಿಷ್ಟು ಹಣ ಸರ್ಕಾರಕ್ಕೆ ತೆರಿಗೆ ಪಾವತಿಯಾಗುತ್ತದೆ ಎಂದು ತಿಳಿಸಿದ ಅವರು, ರಸೀದಿ ಪಡೆಯುವುದು ನಮ್ಮ ಹಕ್ಕು. ಅದರಿಂದ ದೇಶಕ್ಕೆ ತೆರಿಗೆಯೂ ಪಾವತಿಯಾಗಲಿದ್ದು, ನಾವುಗಳು ದೇಶಕ್ಕೆ ಮಾಡುವ ಕರ್ತವ್ಯ ಹಾಗೂ ಅಳಿಲು ಸೇವೆ ಎಂದು ಅಭಿಪ್ರಾಯಪಟ್ಟರು.ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ದೂರುಗಳನ್ನು ತ್ವರಿತವಾಗಿ ಪರಿಹರಿಸಲಿದೆ. ಯಾವುದಾದರೂ ಒಂದು ವಸ್ತುವನ್ನು ಖರೀದಿ ಮಾಡಿದಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಗ್ರಾಹಕ ಮತ್ತು ಮಾಲೀಕರ ಮಧ್ಯೆ ಆಗುವ ಸೇವೆಯು ವಿಫಲವಾದಲ್ಲಿ ಮಾತ್ರ ಗ್ರಾಹಕರ ವ್ಯಾಜ್ಯ ಪರಿಹಾರಕ್ಕೆ ದೂರು ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಇದೆ. ಈ ಕಾಯ್ದೆಯ ಪ್ರಕಾರ ಗ್ರಾಹಕರಿಗೆ ಆರು ಹಕ್ಕುಗಳನ್ನು ಕೊಡಲಾಗಿದೆ. ಸುರಕ್ಷತೆಯ ಹಕ್ಕು, ಮಾಹಿತಿಯ ಹಕ್ಕು, ಆಯ್ಕೆ ಮಾಡುವ ಹಕ್ಕು, ಕೇಳಿಸಿಕೊಳ್ಳುವ ಹಕ್ಕು ಮತ್ತು ಪರಿಹಾರ ಪಡೆಯುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು ಸೇರಿ ಈ ಎಲ್ಲ ಹಕ್ಕುಗಳನ್ನು ಪಡೆಯಬೇಕಾದರೆ ನಾವು ಯಾವುದೇ ವಸ್ತು ಖರೀದಿಸಿದಾಗ, ಖರೀದಿಗೆ ಸಂಬಂಧಿಸಿದಂತೆ ಮಾರಾಟಗಾರರಿಂದ ಸೂಕ್ತ ದಾಖಲೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಮಾತನಾಡಿ, ಯಾವುದೇ ವಸ್ತುವನ್ನು ನಾವು ಖರೀದಿಸಿದರೆ ನಾವು ಗ್ರಾಹಕರಾಗುತ್ತೇವೆ. ಆದರೆ ಕಾನೂನಿನ ದೃಷ್ಠಿಯಿಂದ ಗ್ರಾಹಕರಾಗಬೇಕಾದರೆ ಗ್ರಾಹಕರು ತೆಗೆದುಕೊಳ್ಳುವ ಸರಕು ಮತ್ತು ಸೇವೆಗೆ ರಸೀದಿ ತೆಗೆದುಕೊಂಡಾಗ ಮಾತ್ರ ನಾವು ಕಾನೂನು ಬದ್ಧ ಗ್ರಾಹಕರಾಗುತ್ತೇವೆ. ಅಂತಹವರಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನೊಂದ ಗ್ರಾಹಕರು 1 ಲಕ್ಷದಿಂದ 50 ಲಕ್ಷ ರು. ದವರೆಗೂ ಪರಿಹಾರ ಪಡೆದುಕೊಳ್ಳಬಹುದಾಗಿದೆ. ರಾಜ್ಯ ಗ್ರಾಹಕರ ಆಯೋಗದಲ್ಲಿ 50 ಲಕ್ಷದಿಂದ 2 ಕೋಟಿಯವರಗೆ ಪರಿಹಾರ ಪಡೆದುಕೊಳ್ಳಬಹುದು. ರಾಷ್ಟ್ರೀಯ ಗ್ರಾಹಕರ ಆಯೋಗದಲ್ಲಿ 2 ಕೋಟಿಯಿಂದ 10 ಕೋಟಿ ರು.ವರಗೆ ಪರಿಹಾರ ಪಡೆದುಕೊಳ್ಳಬಹುದು. ನೊಂದ ಗ್ರಾಹಕರು ತಾವು ಇರುವ ಸ್ಥಳದಿಂದ ದೂರು ಸಲ್ಲಿಸಬಹುದು ಅಥವಾ ಪ್ರತಿವಾದಿ ಇರುವ ಸ್ಥಳದಲ್ಲಿಯೂ ದೂರು ಸಲ್ಲಿಸಬಹುದು ಎಂದರು.
ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಅವರು ಗ್ರಾಹಕರ ರಕ್ಷಣಾ ಕಾಯಿದೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕಾನೂನು ಮಾಪನಾಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಚನ್ನಬಸಪ್ಪ, ಕೆಎಸ್‍ಸಿಎಸ್‍ಇ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ.ಮಲ್ಲಿಕಾರ್ಜುನ್ ಇದ್ದರು.