ಕನ್ನಡಪ್ರಭ ವಾರ್ತೆ ಕೋಲಾರಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಮೈಸೂರು ಸಂಸ್ಥಾನದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ರಚನೆ ಮಾಡುತ್ತಿದ್ದರು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ ಇವರನ್ನು ಕನ್ನಡದ ಆಸ್ತಿ ಎಂದು ಕರೆಯುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ಮಾಲೂರು ತಾಲೂಕಿನ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೪ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ಸೌಲಭ್ಯ ಇಲ್ಲದಿದ್ದರೂ ಸಾಧನೆ
ಮಾಸ್ತಿ ಗ್ರಾಮವು ಪಕ್ಕದಲ್ಲಿಯೇ ತಮಿಳುನಾಡಿನ ಗಡಿಗೆ ಹೊಂದುಕೊಂಡಿದ್ದರೂ ಕನ್ನಡ ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಕನ್ನಡ ಭಾಷಾ ಬಳಕೆ ಮಾಡುವುದರಿಂದ ಇನ್ನಷ್ಟು ಕನ್ನಡ ಸಾಹಿತ್ಯದ ಕೆಲಸ ಮಾಡಬಹುದು, ಬೇರೆ ಯಾವುದೋ ಭಾಷೆಯ ವ್ಯಾಮೋಹಕ್ಕೆ ನಮ್ಮ ಭಾಷೆ ಬಲಿಪಶು ಮಾಡುವುದು ಸರಿಯಲ್ಲ. ದಯವಿಟ್ಟು ಕನ್ನಡವನ್ನು ಓದುವ ಅಭ್ಯಾಸ ಮಾಡಿಕೊಂಡರೆ ಹೃದಯ ಶ್ರೀಮಂತರಾಗುತ್ತೀರಾ ಎಂದರು.ಮಾಸ್ತಿ ಹೆಸರಿನಲ್ಲಿ ವಸತಿ ಶಾಲೆ
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಮ್ಮ ತಾಲೂಕಿನವರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷವಾಗಿದೆ. ಅವರು ವಾಸಿಸುತ್ತಿದಂತಹ ಮನೆಯಿದ್ದು, ಅದನ್ನು ಗ್ರಂಥಾಲಯ ಮಾಡಲಾಗಿದೆ. ನೂತನವಾಗಿ ೨ ಕೋಟಿ ರೂ. ವೆಚ್ಚದಲ್ಲಿ ಮಾಸ್ತಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಿದ್ದೇವೆ ಮತ್ತು ಶೀಘ್ರವೇ ಮಾಸ್ತಿ ಅವರ ಹೆಸರಿನಲ್ಲಿ ವಸತಿ ಶಾಲೆ ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಭಾವಚಿತ್ರ ಇರುವ ಸುಮಾರು ೧೫ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳ ಮೆರವಣಿಗೆ ಕಾರ್ಯಕ್ಕೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಮಾಸ್ತಿ ಗ್ರಾಪಂ ಆವರಣದಿಂದ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಅವರು ವಾಸಿಸುತ್ತಿದ್ದ, ಮನೆಯ ಆವರಣದಲ್ಲಿ ವೆಂಕಟೇಶ್ ಅಯ್ಯಂಗಾರ್ ಪುತ್ಥಳಿ ಉದ್ಘಾಟಿಸಿದರು.ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್, ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ, ಮಾಲೂರು ತಹಸೀಲ್ದಾರ್ ಎಂ.ವಿ.ರೂಪ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮಾಲೂರು ತಾಲ್ಲೂಕು ಕಾರ್ಯನಿರ್ವಹಕಾಧಿಕಾರಿ ಕೃಷ್ಣಪ್ಪ, ಮುಖಂಡರಾದ ಶಶಿಕಲಾ, ಹನುಮಂತಪ್ಪ, ಅಶ್ವತ್ ರೆಡ್ಡಿ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರವಿಕುಮಾರ್, ಅಕ್ರಂ ಪಾಷಾ, ಸರ್ದಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಇದ್ದರು.