ಯೋಜನೆಯಿಂದ ಫಲಾನುಭವಿಗಳು ವಂಚಿತರಾಗದಿರಲಿ: ವಿ.ಎಂ.ಮುನಿಯಪ್ಪ

KannadaprabhaNewsNetwork | Published : May 9, 2025 12:30 AM
Follow Us

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಪ್ರತಿ ತಿಂಗಳು ಅಧಿಕಾರಗಳ ಸಭೆ ಕರೆದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರವು ಬಡಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಎಲ್ಲರ ಮನೆಗೆ ತಲುಪುವಂತೆ ಮಾಡಿದ್ದಾರೆ. ಅಧಿಕಾರಿಗಳು ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪುವಂತೆ ಮಾಡುವ ಜವಾಬ್ದಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ವಿ.ಎಂ.ಮುನಿಯಪ್ಪ ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ಕುರಿತು ಅಧಿಕಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಪ್ರತಿ ತಿಂಗಳು ಅಧಿಕಾರಗಳ ಸಭೆ ಕರೆದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರೊಂದಿಗೆ ಅಧಿಕಾರಿಗಳು ಸೇರಿದಂತೆ ಸರ್ವೆ ಮಾಡಿ ಪಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿ ರಾಜ್ಯದಲ್ಲಿ ಮಾದರಿ ತಾಲೂಕು ಮಾಡಬೇಕು ಎಂದರು.ಸೌಲಭ್ಯಗಳ ಕುರಿತಂತೆ ಈಗಾಗಲೇ ಕೆಲವು ಕಡೆಯಲ್ಲಿ ದೂರುಗಳು ಬಂದಿವೆ. ಮುಂದೆ ಅ ರೀತಿಯಲ್ಲಿ ಆಗಲಾರದಂತೆ ನೋಡಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಫಲ ಪಡೆಯಲು ತಾಂತ್ರಿಕ ದೋಷ, ದಾಖಲೆಗಳ ಸಮಸ್ಯೆ ಎದುರುಸುತ್ತಿರುವ ಫಲಾನುಭವಿಗಳನ್ನು ಪತ್ತೆಹಚ್ಚಿ, ಅವರಿಗೆ ಯೋಜನೆ ಸೌಲಭ್ಯ ದೊರೆಯುವಂತೆ ಪ್ರಯತ್ನಿಸಬೇಕು. ಪ್ರತಿಯೊಂದು ಇಲಾಖೆಯ ಹಾಗೂ ಸೊಸೈಟಿಗಳ ಮುಂದೆ ಕಡ್ಡಾಯವಾಗಿ ಗ್ಯಾರಂಟಿ ಸಂಬಂಧಿಸಿದ ಪ್ರಚಾರದ ನಾಮಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್ ಮಾತನಾಡಿ, ಸರ್ಕಾರದ ಯೋಜನೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಸೇರುತ್ತಿದೆ. ದಲ್ಲಾಳಿಗಳನ್ನು ದೂರ ಇಡಲಾಗಿದೆ. ಪ್ರತಿಯೊಂದು ಮಾಹಿತಿ ಸಹ ಸಮಿತಿ ಸದಸ್ಯರ ಗಮನಕ್ಕೆ ತರಬೇಕು. ದೋಷಗಳು ಇದ್ದರೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪ್ರತಿ ಇಲಾಖೆಯಿಂದ ಕನಿಷ್ಠ ಐದು ಜನ ಪಲಾನುಭವಿಗಳ ಮಾಹಿತಿ ನೀಡಬೇಕು. ಹಣ ವಸೂಲಿ ಅಂತಹ ದೂರು ಬಂದರೆ ಸ್ಥಳದಲ್ಲೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ. ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ತಿಳಿಸಿದರು.ಕೋಲಾರ ತಾಲೂಕಿನಲ್ಲಿ 85,334 ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆದರೆ, 75453 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಫಲ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ಪ್ರತಿ ತಿಂಗಳು ಕನಿಷ್ಠ 10 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದು ಸುಮಾರು 3 ಕೋಟಿಗಿಂತ ಹೆಚ್ಚು ಆದಾಯ ಬಂದಿದೆ. ಗೃಹಜ್ಯೋತಿ ಯೋಜನೆಯಡಿ 1,08,824 ಫಲಾನುಭವಿಗಳು ಇದ್ದು ಯುವ ನಿಧಿಯಲ್ಲಿ 1236 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಫಲಾನುಭವಿಗಳನ್ನು ಗುರಿತಿಸಲು ಪ್ರತಿ ಹಂತದಲ್ಲಿ ಮಾಹಿತಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಪಂ ಇಒ ಮಂಜುನಾಥ್, ಸಮಿತಿ ಸದಸ್ಯರಾದ ಅಯೂಬ್ ಖಾನ್, ವಿಜಯಕುಮಾರ್, ಬಾಬು, ಯೂನಿಸ್ ಖಾನ್, ನವೀನ್, ಮಹಮ್ಮದ್ ಇಮ್ರಾನ್, ವಿನೋದ್, ಪುನೀತ್, ಭರತ್, ನಯನಾ ಇದ್ದರು.