ಈಗಾಗಲೇ ದೇಶದ 18 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದೆ. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು.
ಕಂಪ್ಲಿ: ವಚನ ಸಾಹಿತ್ಯವನ್ನು ಉಳಿಸಿಕೊಟ್ಟಂತಹ ವೀರ ಮಡಿವಾಳ ಮಾಚಿದೇವರಾಗಿದ್ದು, ಅವರಿಂದಲೇ ಇಂದು ಜಗತ್ತು ವಚನಗಳನ್ನು ಓದಲು, ಅವುಗಳನ್ನು ಪಾಲಿಸಲು ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಬಸವ ದಳದ ಗಂಗಾವತಿ ಘಟಕದ ಉಪಾಧ್ಯಕ್ಷ ಪಂಪಣ್ಣ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಮಡಿವಾಳ ಮಾಚಿದೇವ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಶರಣರನ್ನು ಜಾತಿಗಳಿಗೆ ಸೀಮಿತಗೊಳಿಸದೇ ಅವರನ್ನು ಆದರ್ಶವಾಗಿ ಪರಿಗಣಿಸಬೇಕು. ಬಸವಣ್ಣನವರು ಹಾಗೂ ಲಿಂಗ ವಿಶ್ವದ ಸ್ವತ್ತಾಗಿದ್ದು ಜಾತಿ, ಧರ್ಮ ಭೇದಗಳಿಲ್ಲದೇ ಯಾರಾದರೂ ಲಿಂಗವನ್ನು ಧರಿಸಬಹುದು ಮತ್ತು ಯಾರಾದರೂ ಬಸವಣ್ಣನವರ ತತ್ವಗಳನ್ನು ಪಾಲಿಸಬಹುದಾಗಿದೆ. ಮಾಚಿದೇವರ ಜಯಂತಿ ಬರೀ ಆಚರಣೆಗೆ ಸೀಮಿತಗೊಳಿಸದೇ ಅವರ ಜೀವನ ಚರಿತ್ರೆ, ವಚನಗಳನ್ನು ಓದಿತಿಳಿದುಕೊಳ್ಳುವ ಮೂಲಕ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಂಪ್ಲಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಂ. ಹುಲುಗಪ್ಪ ಮಾತನಾಡಿ, ಮಡಿವಾಳ ಸಮಾಜವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರದ ಯೋಜನೆಗಳು ಹಾಗೂ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಇದರಿಂದ ಸಮಾಜ ಅಭಿವೃದ್ಧಿಯಿಂದ ಕುಂಠಿತಗೊಂಡಿದೆ. ಹೀಗಾಗಿ ಸರ್ಕಾರ ಮಡಿವಾಳ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು. ಅಲ್ಲದೇ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು, ಈಗಾಗಲೇ ದೇಶದ 18 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ನಮ್ಮ ಸಮುದಾಯವನ್ನು ಎಸ್ಸಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿದರಲ್ಲದೆ, ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಿವರಾಜ ಶಿವಪುರ ಅವರಿಗೆ ಸಲ್ಲಿಸಿದರು. ಪಟ್ಟಣದಲ್ಲಿ ಮಡಿವಾಳರಿಗೆ ಅಗತ್ಯ ದೋಭಿ ಘಾಟಗಳನ್ನು ಸರ್ಕಾರದಿಂದ ನಿರ್ಮಿಸಿಕೊಡುವ ಜತೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಮಡಿವಾಳ ಮಾಚಿದೇವ ದೇವಸ್ಥಾನ ಹಾಗೂ ಸಮುದಾಯ ಭವನಕ್ಕೆ ಜಾಗವನ್ನು ದಾನವಾಗಿ ನೀಡಿರುವ ವಾದಿರಾಜ ಆಚಾರ ಅವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.
ಶಾಸಕ ಜೆ.ಎನ್. ಗಣೇಶ್, ತಹಸೀಲ್ದಾರ್ ಶಿವರಾಜ್ ಶಿವಪುರ, ತಾಪಂ ಇಒ ಆರ್.ಕೆ. ಶ್ರೀಕುಮಾರ, ಉಪತಹಸೀಲ್ದಾರ್ ರವೀಂದ್ರಕುಮಾರ, ಬಸವದಳದ ಪ್ರಮುಖರಾದ ಪಾಮಯ್ಯಶರಣರು, ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ವಾದಿರಾಜ ಆಚಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ರಾವ್, ಮಡಿವಾಳ ಸಮಾಜದ ಮುಖಂಡರಾದ ಎ. ರಾಜೇಶ್, ವಿರೂಪಾಕ್ಷಿ, ವೀರಣ್ಣ, ಹನುಮಂತ, ಹೋಮ್ ಗಾರ್ಡ್ ಈರಣ್ಣ, ಮೇಸ್ತ್ರಿ ರಮೇಶ್, ಎಲ್‌ಐಸಿ ಈರಣ್ಣ, ಗಣೇಶ್ ಪೇಂಟರ್, ರಂಗಪ್ಪ, ಲಕ್ಷ್ಮಣ, ವಿನಾಯಕ, ಶಿವಪ್ಪ, ಶಿವರುದ್ರ, ಬಸಪ್ಪ, ರಾಮಪ್ಪ ಸೇರಿದಂತೆ ತಾಲೂಕು ಆಡಳಿತ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.