ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ.ಬಿ ಹಿರೇಮಠ ಉಪನ್ಯಾಸ ನೀಡಿ, ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳು ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣ ರಾಜಕೀಯ ಮತ್ತು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು. ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದರು.
12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದ ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಾವಳಗಿ ಮಾತನಾಡಿ, ಸಿದ್ದರಾಮೇಶ್ವರರು ಉತ್ತಮ ಸಾಹಿತಿಯಾಗಿದ್ದರು. ಅವರು ರಚಿಸಿರುವ 1992 ವಚನಗಳು ಇಂದು ಲಭ್ಯವಿವೆ. ಅವರು ವಿಧವಾ ವಿವಾಹ, ಶಿಕ್ಷಣ, ಕೆರೆ ಕಟ್ಟೆ ನಿರ್ಮಾಣ, ಜಾತೀಯತೆ ತೊಡೆದು ಹಾಕಲು ಶ್ರಮಿಸಿದರು. ವಚನಗಳ ಪುಟ್ಟ ಪುಸ್ತಕವನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಜನರಿಗೆ ವಚನಕಾರರ ಆಶಯ ತಿಳಿಯುವ ಜತೆಗೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವಾಗುತ್ತದೆ ಎಂದರು.
ತಹಸೀಲ್ದಾರ್ ಕೀರ್ತಿ ಚಾಲಕ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಮ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜಯಂತ್ಯುತ್ಸವದ ಪ್ರಯುಕ್ತ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ನೇತಾಜಿ ನಗರ ಬಡಾವಣೆ ಜಾಲಿಕಟ್ಟಿ ದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡು ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ಮಮ್ಮ ವೃತ್ತದ ಮೂಲಕ ತಾಲೂಕು ಆಡಳಿತ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.ತಾಪಂ ಇಒ ವೆಂಕಟೇಶ ವಂದಾಲ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಬಸಂತಿ ಮಠ, ಹಿಂದುಳಿದ ಕಲ್ಯಾಣ ಇಲಾಖೆ, ಮುಖಂಡರಾದ ಭೋವಿ ಸಮಾಜದ ಅಶೋಕ ಇರಕಲ್ಲ, ಪರುಶುರಾಮ ನಾಲತವಾಡ, ರವಿಚಂದ್ರ ಹಡಲಗೇರಿ, ಪಂಡಿತ ಇರಕಲ್ಲ, ಹಲಿತ ಸಮಾಜದ ಮುಂಡರಾದ ಹರೀಷ ನಾಟಿಕಾರ, ಸಿ.ಜಿ ವಿಜಯಕರ ಹಲವರಿದ್ದರು.