ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪರಿಸರ ಹಾಳು ಮಾಡದಿರಿ

KannadaprabhaNewsNetwork |  
Published : Jul 21, 2025, 01:30 AM IST
ತಾಪಂ ಇಓ ಬಸವರಾಜ ಐನಾಪೂರ ಮಾತನಾಡಿದರು. | Kannada Prabha

ಸಾರಾಂಶ

ಮೊದಲಿಗೆ ನಾವು ನಮ್ಮ ಮನೆಯ ಪರಿಸರ ಕಾಯ್ದುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಗೆ ವಿರೋಧ ವ್ಯಕ್ತ ಪಡಿಸಬೇಕು. ಮನೆಯ ಸುತ್ತಲೂ ಗಿಡಮರಳಗಳನ್ನು ಬೆಳೆದು ಪರಿಸರ ಸಂರಕ್ಷಿಸಬೇಕು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೀಡಲು ಇಂದಿನಿಂದಲೇ ಶಪಥ ಮಾಡಬೇಕು. ಸ್ವಚ್ಛ ಪರಿಸರ ಕೊಡುಗೆ ನೀಡಲು ಪ್ರತಿಯೊಬ್ಬರ ಶ್ರಮ ಅಗತ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹೇಳಿದರು.

ಬರೋಡಾ ಬ್ಯಾಂಕ್‌ನ 118ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬ್ಯಾಂಕ್ ಸಿಬ್ಬಂದಿ, ಪ್ರೆಸ್‌ಕ್ಲಬ್ ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಆಕರ್ಷಕ ಮೆರವಣಿಗೆ ನಡೆಸಿ, ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಿದರು. ತದನಂತರ ಇಲ್ಲಿನ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೊದಲಿಗೆ ನಾವು ನಮ್ಮ ಮನೆಯ ಪರಿಸರ ಕಾಯ್ದುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಗೆ ವಿರೋಧ ವ್ಯಕ್ತ ಪಡಿಸಬೇಕು. ಮನೆಯ ಸುತ್ತಲೂ ಗಿಡಮರಳಗಳನ್ನು ಬೆಳೆದು ಪರಿಸರ ಸಂರಕ್ಷಿಸಬೇಕು. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳು ಮಾಡುವುದನ್ನು ಎಲ್ಲರೂ ನಿಲ್ಲಿಸಿ ಪರಿಸರ ರಕ್ಷಣೆ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಮಾತನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ ಮನೆಯ ಆಂತರಿಕ ಮತ್ತು ಬಾಹ್ಯ ಪರಿಸರದ ಉಳುವಿಗೆ ಶ್ರಮಿಸಲು ಎಲ್ಲರೂ ಕೈಜೋಡಿಸಬೇಕೆಂದರು. ಮಧುಮೇಹ ತಜ್ಞ ಡಾ.ಸಯ್ಯದಲಿ ಅಲಿಸಾಬನವರ ಮಾತನಾಡಿ, ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದರ ಮುನ್ನವೇ ಜಾಗೃತಿ ವಹಿಸಿಕೊಳ್ಳಬೇಕು. ಆರೋಗ್ಯ ಎಂದರೆ ಮನುಷ್ಯ ದೇಹಕ್ಕೆ ಅಂಟುವ ರೋಗವಲ್ಲ. ಸಮಾಜಕ್ಕೆ ಅಂಟುವ ರೋಗದ ಲಕ್ಷಣಗಳನ್ನು ಗುರುತಿಸಿ ಜಾಗೃತರಾಗಬೇಕು ಎಂದು ತಿಳಿಸಿದರು.

ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ಪೊಲೀಸ್ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ 50 ಜನರ ತಂಡದ ಸಭೆಯಲ್ಲಿ ಅಲ್ಲಿನ ಸಮಸ್ಯೆ ಮತ್ತು ಪರಿಹಾರದ ಕುರಿತು ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಿತಿಗಳನ್ನು ರಚಿಸಲಾಗುವುದು. ಎಲ್ಲರೂ ಸೌಹಾರ್ದತೆಯಿಂದ ಬದುಕಿ ಸುಂದರ ಸಮಾಜ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ, ಬರೋಡಾ ಬ್ಯಾಂಕಿನ ಸಿಬ್ಬಂದಿ ಬ್ಯಾಂಕಿನ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿದೆ. ಬರೋಡಾ ಬ್ಯಾಂಕಿನ ಕಾರ್ಯಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು. ಬ್ಯಾಂಕಿನ ವ್ಯವಸ್ಥಾಪಕ ಹನಮಂತರಾಯ ಬಿರಾದಾರ ಸ್ವಾಗತಿಸಿ, ಬ್ಯಾಂಕ್‌ ರಾಮದುರ್ಗದಲ್ಲಿ ಆರಂಭಗೊಂಡ ಒಂದು ವರ್ಷದಲ್ಲಿ ಒಟ್ಟು ₹30 ಕೋಟಿ ವಹಿವಾಟು ನಡೆಸಿದೆ. ಇದಕ್ಕೆ ರಾಮದುರ್ಗದ ಗ್ರಾಹಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಸಿಡಿಪಿಓ ಶಂಕರ ಕುಂಬಾರ, ಗಣ್ಯ ವರ್ತಕರಾದ ಶಶಿಧರ ಮಾಳವಾಡ, ಅಮರ ದೂತ, ದುಂಡಪ್ಪ ದೇವರಡ್ಡಿ, ಬಿಸಿಎಂ ಸಹಾಯಕ ನಿರ್ದೇಶಕಿ ಶಿವಕ್ಕ ಮಾದರ, ಪ್ರೆಸ್‌ಕ್ಲಬ್ ಅಧ್ಯಕ್ಷ ರವಿ ಸದಾಶಿವನವರ, ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು.

ಆಕರ್ಷಕ ಮೆರವಣಿಗೆ:

ತೇರ್‌ ಬಜಾರಿನಲ್ಲಿಯ ಬರೋಡಾ ಬ್ಯಾಂಕಿನಿಂದ ಸ್ವಚ್ಛತೆಯ ಅರಿವು ಮೂಡಿಸುವ ಬ್ಯಾನರ್, ಆರೋಗ್ಯ ರಕ್ಷಣೆಯ ಜವಾಬ್ದಾರಿಗಳ ಫಲಕಗಳನ್ನು ಹಿಡಿದು ನೂರಾರು ಜನ ಪಟ್ಟಣದಲ್ಲಿ ಆಕರ್ಷಕ ಮೆರವಣಿಗೆ ನಡೆಸಿದರು. ತೇರ ಬಜಾರಿನಿಂದ ಹಳೆ ಪೊಲೀಸ್ ಠಾಣೆ ಮಾರ್ಗ, ಅಂಬೇಡ್ಕರ್‌ ಬೀದಿ, ಹಳೆ ಬಸ್ ನಿಲ್ದಾಣದ ಮೂಲಕ ವಿದ್ಯಾಚೇತನ ಆವರಣದಲ್ಲಿಯ ಗುರು ಭವನದ ತನಕ ಮೆರವಣಿಗೆ ಸಾಗಿ ಬಂದಿತು. ಎಲ್ಲ ಅಧಿಕಾರಿಗಳು, ಬ್ಯಾಂಕಿನ ಸಿಬ್ಬಂದಿ, ಪ್ರೆಸ್‌ಕ್ಲಬ್ ಸದಸ್ಯರು, ವ್ಯಾಪಾರಸ್ಥರು ಘೋಷಣೆಗಳನ್ನು ಕೂಗಿ ಜನರನ್ನು ಎಚ್ಚರಿಸಿದರು. ಶಿಕ್ಷಕರು, ಶಾಲಾ ಮಕ್ಕಳು, ಅಧಿಕಾರಿಗಳು, ಪತ್ರಕರ್ತರು, ವ್ಯಾಪಾರಸ್ಥರು, ಬ್ಯಾಂಕಿನ ಗ್ರಾಹಕರು, ಗ್ರಾಮಸ್ಥರು ಪರಿಸರ ಜಾಗೃತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ