ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ಬೇಂದ್ರೆ ಭಾವಯಾನ ಗೀತಗಾಯನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾವೇರಿಬೇಂದ್ರೆ ಅವರ ಕಾವ್ಯವು ಅತ್ಯಂತ ಸರಳ, ಸಹಜ ಭಾಷೆಯಲ್ಲಿ ಅಂತರಾರ್ಥವನ್ನು ನೀಡುವ ಸಾಹಿತ್ಯ. ಜತೆಗೆ ಬೇಂದ್ರೆಯವರು ಜೀವನ ನಡೆಸಿದಂತೆ ಕಾವ್ಯವನ್ನು ರಚಿಸಿದರು. ಕಾವ್ಯ ಬರೆದಂತೆ ಬದುಕಿದರು ಎಂದು ಸಾಹಿತಿ ಮಾರ್ತಂಡಪ್ಪ ಕತ್ತಿ ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕಲಾಸ್ಪಂದನ ಹಾಗೂ ಸಿರಿಗನ್ನಡ ಸೇವಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ಬೇಂದ್ರೆ ಭಾವಯಾನ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಜೀವನದ ಅನುಭವವನ್ನು ಬರೆದಿಡುವುದನ್ನು ರೂಡಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಯ ಹಿನ್ನೆಲೆ ಸೃಜನಶೀಲತೆಯನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ, ಬೇಂದ್ರೆ ಭಾವಯಾನ ಗೀತ ಗಾಯನ ಕಾರ್ಯಕ್ರಮದ ಮೂಲಕ ನಾಡು ನುಡಿ ಚಿಂತನೆ ಮತ್ತು ಸಾಹಿತ್ಯದ ಬದುಕನ್ನು ತಿಳಿಸುವ ಕಾರ್ಯಕ್ರಮ ಇದಾಗಿದೆ. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಸಂದೇಶ ಸಾರಿದ ಮಹಾಪುರುಷ ಬೇಂದ್ರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪಪೂ ಪ್ರಾಚಾರ್ಯ ಡಾ. ಜೆ.ಆರ್. ಶಿಂಧೆ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಇಂತಹ ಸಾಹಿತಿಗಳ ಸಾಹಿತ್ಯ ಓದಿ ಬದುಕನ್ನು ಅರಳಿಸಿಕೊಳ್ಳಬೇಕು ಎಂದರು.
ವಿದ್ವಾನ್ ರವೀಂದ್ರ ಮಳಗಿ, ಗಿರಿಜಾ ಮಳಗಿ ಹಾಗೂ ಭೂಮಿಕಾ ರಜಪೂತ ಬೇಂದ್ರೆಯವರ ಭಾವಗೀತೆಯ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಜೆ.ಎಫ್. ಹೊಸಮನಿ ಮಾತನಾಡಿದರು.ರೇಣುಕಾ ಶೇತಸನದಿ ಪ್ರಾರ್ಥಿಸಿದರು. ಸೋಮಣ್ಣ ಡಂಬರಮತ್ತೂರ ಸ್ವಾಗತಿಸಿದರು. ಡಾ. ಆತ್ಮಾನಂದ ಹೊಳೆಣ್ಣವರ, ಡಾ. ಎಂ.ವಿ. ಸಾತೇನಹಳ್ಳಿ, ಪ್ರೊ. ಮಹೇಶ ಬೆಂಡಿಗೇರಿ, ಅನಿತಾ ಉಗರಗೋಳ, ಕಿರಣ ಹೂಗಾರ, ಸಿ.ಎಫ್. ಬಾಲೆಹೊಸೂರಮಠ, ಜಗದೀಶ ಕತ್ತಿ, ಗಂಗಾಧರ ಹಿರೇಮಠ ಇದ್ದರು. ಮಣಿಕಂಠ ಗೋದಮನಿ ನಿರೂಪಿಸಿದರು. ಬಸವರಾಜ ಹೊಂಗಲ ವಂದಿಸಿದರು.