ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ಸಲಹೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಅವರು ಸಲಹೆ ಮಾಡಿದರು.ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ದೇವರಂತೆ, ಸರಿ-ತಪ್ಪುಗಳ ಅರಿವು ಇರುವುದಿಲ್ಲ. ವಯೋಸಹಜವಾಗಿ ಹಿರಿಯ ನಾಗರಿಕರು ಸಹ ಮಕ್ಕಳು ಆಗಿರುತ್ತಾರೆ. ಬಾಲ್ಯ, ಯೌವ್ವನ, ಮುಪ್ಪು ಈ ಮೂರು ಹಂತಗಳಲ್ಲಿನ ಸಿಹಿ-ಕಹಿ ಅನುಭವಗಳು ಹಿರಿಯರಿಗೆ ಇರುತ್ತವೆ. ಒಂದು ಸಮಾಜ, ಕುಟುಂಬ ಉತ್ತಮವಾಗಿ ಸಾಗಲು ಹಿರಿಯರ ಮಾರ್ಗದರ್ಶನದ ಅವಶ್ಯವಿದೆ ಎಂದರು.
ಹಿರಿಯರ ಪಾಲನೆ ಬಗ್ಗೆ ಅಸಡ್ಡೆ ವಹಿಸಿ ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಿರಿಯ ನಾಗರಿಕರ ಸಲಹೆಗಳನ್ನು ಮಕ್ಕಳು ತಪ್ಪಾಗಿ ಅರ್ಥೈಸದೇ ಅವರನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಮಕ್ಕಳು ಕಡೆಗಣಿಸಿದರೂ ಹಿರಿಯರು ಧೃತಿಗೆಡದೇ ಧೈರ್ಯವಾಗಿ ಸ್ವಾವಲಂಬಿ ಜೀವನ ನಡೆಸಲು ಸಿದ್ದರಾಗಿರಬೇಕು. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಹತ್ತು-ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯೋಜನೆಗಳು ಸಮರ್ಪಕವಾಗಿ ಹಿರಿಯ ನಾಗರಿಕರನ್ನು ತಲುಪಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ಸುರೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಅವರು ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮೀನಾಕ್ಷಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಸುರೇಶ್‌ಕುಮಾರ್, ವೃದ್ಧಾಶ್ರಮದ ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.