ಜೆಜೆಎಂನಿಂದ ಕುಡಿಯುವ ನೀರಿನ ಸಮಸ್ಯೆ ಆಗದಿರಲಿ: ಸೂಚನೆ

KannadaprabhaNewsNetwork | Published : Jul 27, 2024 12:59 AM

ಸಾರಾಂಶ

ಮಸ್ಕಿ ತಾಲೂಕಿನ ಗುಡದೂರು ಗ್ರಾಪಂಯ ಮೇರನಾಳ ಶಾಲೆಗೆ ಕೇಂದ್ರ ತಂಡದ ಜಗಜಿತ್ ಸಿಂಗ್ ಸೌದಿ, ದೇವೇಶ್ ಕುಮಾರ್ ಭಾರಧ್ವಾಜ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಯೋಜನೆಗಳಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳಿ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ನೈರ್ಮಲ್ಯ ಸಮಿತಿ ರಚನೆ ಮಾಡಿ ಎಂದು ಕೇಂದ್ರ ಸರ್ಕಾರದ ಜಗಜಿತ್ ಸಿಂಗ್ ಸೌದಿ, ದೇವೇಶ್ ಕುಮಾರ್ ಭಾರಧ್ವಾಜ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಗುಡದೂರು ಗ್ರಾಪಂ ವ್ಯಾಪ್ತಿಯಲ್ಲಿ ಅವರು ಭೇಟಿ ನೀಡಿ, ಜೆಜೆಎಂ ಕಾಮಗಾರಿ, ಕುಡಿಯುವ ನೀರು, ಸ್ವಚ್ಛ ಭಾರತ್ ಮಿಷನ್ ಸೇರಿ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು. ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಅನುಷ್ಠಾನದ ಕುರಿತು ಗ್ರಾಮ ನೀರು ನೈರ್ಮಲ್ಯ ಸಮಿತಿಯ ರಚನೆ ಮತ್ತು ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ತದ ನಂತರ ಕುಡಿಯುವ ನೀರಿನ ಗುಣಮಟ್ಟದ ಕುರಿತು ಸ್ಥಳೀಯ ನೀರು ನಿರ್ವಹಣೆ ಸಮಿತಿಯಿಂದ ಎಫ್ಟಿಕೆ ಕಿಟ್ ಮೂಲಕ ನೀರು ಪರೀಕ್ಷಿಸುವುದನ್ನು ವೀಕ್ಷಿಸಿದರು.

ಮನೆ ಮನೆಗೆ ಕಾರ್ಯಾತ್ಮಕ ನಳ, ವೈಯಕ್ತಿಕ ಶೌಚಾಲಯ, ಶಾಲಾ, ಅಂಗನವಾಡಿ - ಶೌಚಾಲಯ, ಸ್ವಸಹಾಯ ಸಂಘ ರಚನೆ ಕುರಿತು ಮಾಹಿತಿ ಪಡೆದರು. ನಂತರ ಮೇರನಾಳ ಮತ್ತು ಗೋನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಾಲಯ ಬಳಕೆ, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಯೂಟದ ಕೊಠಡಿಗಳನ್ನು ಪರಿಶೀಲಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷರಾದ ಮಾರೆಮ್ಮ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್, ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಸೋಮನಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ಪಾಲಕ ಅಭಿಯಂತರ ವಿನೋದ್ ಕುಮಾರ್ ಗುಪ್ತಾ ಸೇರಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

Share this article