ಹುಬ್ಬಳ್ಳಿ: ಹೃದಯಾಘಾತದ ಕುರಿತು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ಭಯಪಡದೇ ಸೂಕ್ತ ಜಾಗೃತಿ ಹೊಂದುವುದು ಅವಶ್ಯಕವಾಗಿದೆ ಎಂದು ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್‌ಕೇರ್ ಸೆಂಟರ್‌ನ ಹಿರಿಯ ಹೃದ್ರೋಗ ತಜ್ಞ ಡಾ. ರಘು ಪ್ರಸಾದ ಹೇಳಿದರು.
ಇಲ್ಲಿನ ವಿದ್ಯಾನಗರದ ಸ್ಟೆಲ್ಲರ್ ಮಾಲ್‌ನಲ್ಲಿರುವ ಕನ್ನಡಪ್ರಭ ಕಚೇರಿಯಲ್ಲಿ ಬುಧವಾರ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ಹಾಗೂ ದಂತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬದಲಾದ ಜೀವನಶೈಲಿ, ಧೂಮಪಾನ, ಮದ್ಯಪಾನ ಮಾಡುವುದರಿಂದ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರವಾದ ವಸ್ತು ಎತ್ತಿದಾಗ, ಹೆಚ್ಚು ನಡೆದಾಗ ಉಂಟಾಗುವ ಅಲ್ಪ ಪ್ರಮಾಣದ ಸುಸ್ತು, ಆಯಾಸಕ್ಕೆ ಭಯಪಡುವ ಅಗತ್ಯವಿಲ್ಲ. ಆದರೆ, ಹೆಚ್ಚಿನ ಸುಸ್ತು, ಆಯಾಸವಾದಲ್ಲಿ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಹಿಂದಿನ ಜೀವನ ಶೈಲಿಗೂ, ಇಂದಿನ ಜೀವನ ಶೈಲಿಗೂ ತುಂಬಾ ವ್ಯತ್ಯಾಸವಿದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾದ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆಗೆ ಆದ್ಯತೆ ನೀಡಿ. ಗುಟ್ಕಾ, ತಂಬಾಕು, ಸಿಗರೇಟ್ ಸೇವನೆ ಸಂಪೂರ್ಣವಾಗಿ ತ್ಯಜಿಸಿ ಉತ್ತಮ ಆರೋಗ್ಯದತ್ತ ಕಾಳಜಿ ವಹಿಸುವಂತೆ ಕರೆ ನೀಡಿದರು.ಇಂದು ವೈದ್ಯಕೀಯ ಕ್ಷೇತ್ರವು ತುಂಬಾ ಮುಂದುವರೆದಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾದರೆ ಆರಂಭದಲ್ಲಿಯೇ ಕಂಡು ಹಿಡಿಯಲು ನಾರಾಯಣ ಹಾರ್ಟ್‌ಕೇರ್ ಸೆಂಟರ್‌ನಲ್ಲಿ ಬೇಕಾದ ಅಗತ್ಯ ವೈಜ್ಞಾನಿಕ ತಂತ್ರಜ್ಞಾನ ಹೊಂದಿದ ಅತ್ಯಾಧುನಿಕ ಸೌಲಭ್ಯಗಳಿವೆ. ಯಾರಿಗಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಸಲಹೆ, ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.
ಜತೆಗೆ ತಮ್ಮ ಸಿಬ್ಬಂದಿಗಳ ಆರೋಗ್ಯ ಕಾಳಜಿಗಾಗಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿರುವ ಈ ಶಿಬಿರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡಪ್ರಭದ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಒಂದೇ ಪರಿವಾರದಂತಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳ ಒತ್ತಡದಲ್ಲಿ ಅವರಿಗೆ, ಅವರ ಕುಟುಂಬವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾರಾಯಣ ಹೃದಯಾಲಯದ ಸಹಕಾರದೊಂದಿಗೆ ನಮ್ಮ ಕಚೇರಿಯಲ್ಲೇ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗಾಗಿ ಈ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಇಕೋ, ದಂತ ತಪಾಸಣೆ ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸಲಾಯಿತು. ಜತೆಗೆ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ಸೂಕ್ತ ಆರೋಗ್ಯ ಕಾಳಜಿ, ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಹಲವು ಸಲಹೆ, ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಈ ವೇಳೆ ಎಸ್.ಡಿ.ಎಂ. ನಾರಾಯಣ ಹಾರ್ಟ್ ಕೇರ್‌ನ ಮಾರುಕಟ್ಟೆಯ ಹಿರಿಯ ವ್ಯವಸ್ಥಾಪಕ ಅಜಯ್ ಹುಲಮನಿ, ವೈದ್ಯ ಡಾ. ಸುಂದರ್, ಸಿಬ್ಬಂದಿಗಳಾದ ನಾಗರಾಜ ಬಡಿಗೇರ, ಶಿವಕುಮಾರ, ಸಂಜನಾ, ಸವಿತಾ, ಕವಿತಾ, ದೀಪಾ, ಕಿಶನ್ ಸೇರಿದಂತೆ ಹಲವರಿದ್ದರು.
ಕನ್ನಡಪ್ರಭದ ಸುದ್ದಿ ಸಂಪಾದಕ ಮಧುಕೇಶ್ವರ ಯಾಜಿ, ಮುಖ್ಯ ವರದಿಗಾರ ಶಿವಾನಂದ ಗೊಂಬಿ, ಪ್ರಸಾರಾಂಗ ವಿಭಾಗದ ಮುಖ್ಯಸ್ಥ ಶ್ರೀಪಾದ ಕುಲಕರ್ಣಿ, ಜಾಹಿರಾತು ವಿಭಾಗದ ಮುಖ್ಯಸ್ಥ ನಾಗರಾಜ ಇಟಗಿ ಸೇರಿದಂತೆ ಹುಬ್ಬಳ್ಳಿ ಕಚೇರಿಯ ಎಲ್ಲ ಸಿಬ್ಬಂದಿ ತಪಾಸನೆಗೆ ಒಳಗಾದರು.ದಂತ ತಪಾಸಣೆ: ಒಂದೆಡೆ ಹೃದಯ ತಪಾಸಣಾ ಶಿಬಿರ ನಡೆದರೆ, ಇನ್ನೊಂದೆಡೆ ಹುಬ್ಬಳ್ಳಿಯ ಡೆಂಟಲ್ ದಿಸ್ಟ್ರಿಕ್ಟ್ ಕ್ಲಿನಿಕ್‌ನ ದಂತ ವೈದ್ಯೆ ಡಾ. ವಿದ್ಯಾ ಶಿವಪುರ ಅವರು ದಂತ ತಪಾಸಣೆ ಶಿಬಿರ ನಡೆಸಿದರು. ದಂತದ ಆರೋಗ್ಯದ ಕುರಿತು ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಿದರು. ನಫೀಜಾ ಇಟಗಿ ನೆರವಾಗಿದ್ದರು.