ಟೆಂಡರ್‌ದಾರರ ಎಂಜಲು ಕಾಸಿಗೆ ಕೈ ಚಾಚಬೇಡಿ: ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ಎಚ್ಚರಿಕೆ

KannadaprabhaNewsNetwork |  
Published : Oct 15, 2025, 02:08 AM IST
ಹೂವಿನಹಡಗಲಿಯ ತಾಪಂ ಸಭಾಂಗಣದಲ್ಲಿ ತಾಪಂ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕ ಕೃಷ್ಣನಾಯ್ಕ. | Kannada Prabha

ಸಾರಾಂಶ

ಸಮಾಜ ಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್‌ಗಳಿಗೆ ಪೂರೈಸುವ ಆಹಾರ ಧಾನ್ಯ ಟೆಂಡರ್‌ನಲ್ಲಿರುವ ಗುಣ ಮಟ್ಟದ ಧಾನ್ಯಗಳು ಇಲ್ಲ, ಅಂತಹ ಧಾನ್ಯ ಇಳಿಸಿಕೊಂಡು ಅವರು ನೀಡುವ ಎಂಜಲು ಕಾಸಿಗೆ ಕೈ ಚಾಚಿ ಕುಳಿತರೇ, ಬಡ ಮಕ್ಕಳು ನೀವು ಕೊಟ್ಟ ಆಹಾರ ತಿನ್ನಬೇಕಾ ಎಂದು ಶಾಸಕ ಕೃಷ್ಣನಾಯ್ಕ ಪ್ರಶ್ನಿಸಿದರು.

ಹೂವಿನಹಡಗಲಿ: ತಾಲೂಕಿನ ಸಮಾಜ ಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್‌ ಹಾಗೂ ಬಿಸಿಯೂಟ ಯೋಜನೆಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡುವ ಗುತ್ತಿಗೆದಾರರ ಎಂಜಲು ಕಾಸಿಗೆ ಕೈ ಚಾಚಬೇಡಿ, ಬಡ ಮಕ್ಕಳಿಗೆ ದ್ರೋಹ ಮಾಡಿದರೆ ಒಳ್ಳೆಯದಾಗುವುದಿಲ್ಲ. ನಾನು ಆಹಾರ ಧಾನ್ಯಗಳನ್ನು ಪರೀಕ್ಷಿಸಿದ ಬಳಿಕ ಆಹಾರ ಧಾನ್ಯ ಇಳಿಸಿಕೊಳ್ಳಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಇಲ್ಲಿನ ತಾಪಂ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ, ತಾಪಂ ಕೆಡಿಪಿ ಮತ್ತು ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಿಸಿಯೂಟದ ಆಹಾರ ಧಾನ್ಯಗಳ ಪೂರೈಕೆಗೆ ಟೆಂಡರ್‌ ಪಡೆದ ವ್ಯಕ್ತಿ ಗುಣಮಟ್ಟಕ್ಕೆ ತಕ್ಕಂತೆ ಆಹಾರ ಧಾನ್ಯ ಇರಬೇಕು. ನೀವು ಪರೀಕ್ಷೆ ಮಾಡದೇ ಅವರು ಕೊಟ್ಟಂತಹ ಧಾನ್ಯ ತೆಗೆದುಕೊಳ್ಳುತ್ತಿದ್ದೀರಿ, ಜತೆಗೆ ನಿತ್ಯ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಅಡುಗೆದಾರರು, ಅಂಗನವಾಡಿ ಕೇಂದ್ರಗಳಲ್ಲಿ ಮೂಟೆ ಗಂಟಲೆ ಆಹಾರ ಧಾನ್ಯ ತೆಗೆದುಕೊಂಡು ಹೋಗುತ್ತಿದ್ದಾರೆಂದು ಬಿಸಿಯೂಟ ಅಧಿಕಾರಿ ವಿ.ಹನುಮಂತಪ್ಪಗೆ ಶಾಸಕರು ಪ್ರಶ್ನಿಸಿದರು.

ಈವರೆಗೂ ಇಂತಹ ಪ್ರಕರಣಗಳು ಕಂಡು ಬಂದಿಲ್ಲ, ಇಂತಹ ಘಟನೆ ಕಂಡು ಬಂದರೇ ಕ್ರಮಕ್ಕೆ ಮುಂದಾಗುತ್ತೇವೆಂದು ಹನುಮಂತಪ್ಪ ಉತ್ತರಿಸಿದರು.

ಸಮಾಜ ಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್‌ಗಳಿಗೆ ಪೂರೈಸುವ ಆಹಾರ ಧಾನ್ಯ ಟೆಂಡರ್‌ನಲ್ಲಿರುವ ಗುಣ ಮಟ್ಟದ ಧಾನ್ಯಗಳು ಇಲ್ಲ, ಅಂತಹ ಧಾನ್ಯ ಇಳಿಸಿಕೊಂಡು ಅವರು ನೀಡುವ ಎಂಜಲು ಕಾಸಿಗೆ ಕೈ ಚಾಚಿ ಕುಳಿತರೇ, ಬಡ ಮಕ್ಕಳು ನೀವು ಕೊಟ್ಟ ಆಹಾರ ತಿನ್ನಬೇಕಾ?, ನಿಮ್ಮ ಸಿಬ್ಬಂದಿ ಮನೆಗೆ ಧಾನ್ಯ ತೆಗೆದುಕೊಂಡುವ ಹೋಗುವ ಫೋಟೋಗಳಿವೆ. ಇದೇ ರೀತಿ ಮುಂದುವರಿದರೆ ನಿಮ್ಮ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಕ್ಕಳಿಗೆ ನೀಡುವ ಮೊಟ್ಟೆ, ಚಿಕನ್‌ ಖರೀದಿ ಬಿಲ್‌ನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಇದೆ, ಮಕ್ಕಳಿಗೆ 2-3 ಪೀಸ್‌ ಮಾತ್ರ ನೀಡುತ್ತಿದ್ದೀರಿ, ಮತ್ತೆ ಕೇಳಿದರೇ ಇಲ್ಲ, ಹೊಟ್ಟೆ ತುಂಬಾ ಆಹಾರ ನೀಡದಿದ್ದರೇ ಹೇಗೆ? ನೀವು ಲೂಟಿ ಹೊಡೆದು ಮಕ್ಕಳನ್ನು ಉಪವಾಸ ಹಾಕುತ್ತೀರಿ ಎಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳ ಮೇಲೆ ಗರಂ ಆಗಿದ್ದರು.

ತಾಲೂಕಿನ 26 ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರಸ್ತೆ, ಚರಂಡಿಗಳು ಹಾಗೂ ಸರ್ಕಾರದ ಆಸ್ತಿಯಲ್ಲಿ ಮನೆ ನಿರ್ಮಿಸಿದ್ದರೂ, ಅಂತಹ ಮನೆಗಳಿಗೆ ಇ-ಸ್ವತ್ತು ನೀಡಿದ್ದೀರಿ, ನಿಮಗೆ ಸರ್ಕಾರದ ಆಸ್ತಿ ಉಳಿಸಬೇಕೆಂಬ ಸಣ್ಣ ಜ್ಞಾನವೂ ಇಲ್ಲ, ನಿಮಗೆ ತಿಳಿದ ರೀತಿಯಲ್ಲಿ ಪರವಾನಿಗಿ ನೀಡುತ್ತೀರಿ ಇನ್ಮುಂದೆ ಇದು ನಡೆಯುವುದಿಲ್ಲ ಈ ಕುರಿತು ಕ್ರಮಕ್ಕೆ ಎಲ್ಲ ಪಿಡಿಒ ಮುಂದಾಗಬೇಕೆಂದು ಹೇಳಿದರು.

ಅಂತಹ ಮನೆಗಳ ಮಾಲಿಕರಿಗೆ ನೋಟಿಸ್‌ ನೀಡಿ ವಾರದೊಳಗೆ ಜೆಸಿಬಿ ಮೂಲಕ ತೆರವು ಮಾಡಬೇಕು. ಗ್ರಾಮ ಪ್ರವಾಸ ಸಂದರ್ಭದಲ್ಲಿ ಹ್ಯಾರಡ, ಹೊಳಗುಂದಿ, ಮಾಗಳದಲ್ಲಿ ನಾನು ಗಮನಿಸಿದ್ದೇನೆ, ಕೂಡಲೇ ತೆರವು ಮಾಡದಿದ್ದರೇ ನಿಮ್ಮ ಮೇಲೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.

ಕಾಳ ಸಂತೆಯಲ್ಲಿ ಅಕ್ರಮ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ, ಇದರ ಕಡಿವಾಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮ ಜಾಗೃತ ದಳ ಸಮಿತಿ ಏನು ಮಾಡುತ್ತಿದೆ. ಈ ದಂಧೆಯಲ್ಲಿ ಪೊಲೀಸರೂ ಹೊಂದಾಣಿಕೆಯ ಶಂಕೆ ಇದೆ. ಇದೊಂದು ದೊಡ್ಡ ಮಾಫಿಯ ಇದೆ. ಕ್ರಮ ಕೈಗೊಳ್ಳದಿದ್ದರೆ ನಾನು ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಹಾರ ಇಲಾಖೆಯ ನಾಗೇಂದ್ರ ನಾಯ್ಕಗೆ ಎಚ್ಚರಿಕೆ ನೀಡಿದರು.

ಮರಳು ಅಕ್ರಮ ದಂಧೆ ಮೇಲೆ ಅಧಿಕಾರಿಗಳು ದಾಳಿಗೆ ಮುಂದಾದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಾಹನ ಚಾಲಕ ಮೊದಲು ಅಕ್ರಮ ದಂಧೆದಾರರಿಗೆ ಕರೆ ಮಾಡುತ್ತಾನೆ. ಅವನಿಗೆ ದಂಧೆಕೋರರು ಸರಿಯಾಗಿ ಮಾಮೂಲಿ ಕಳಿಸುತ್ತಾರೆ. ಇದೇ ರೀತಿ ಇರುವಾಗ ಅಕ್ರಮ ದಂಧೆಗೆ ಕಡಿವಾಣ ಹೇಗೆ ಹಾಕುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಭೆ ಅಧ್ಯಕ್ಷತೆಯನ್ನು ತಾಪಂ ಆಡಳಿತಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ವಹಿಸಿದ್ದರು. ತಾಪಂ ಇಒ ಪರಮೇಶ್ವರಪ್ಪ ಇದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ