-ಬಂದ್, ಪ್ರತಿಭಟಿಸೋರು ಕೃಷಿ, ತೋಟಗಾರಿಕೆ ತಜ್ಞರಲ್ಲಿ ಚರ್ಚಿಸಲಿ: ಶಿವಶಂಕರ ಕೈದಾಳೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಯಾವುದೇ ಒತ್ತಡಕ್ಕೆ ಮಣಿದು ಈಗ ನೀರು ಹರಿಸದೇ, ಜನವರಿಯಲ್ಲಿ ಸತತವಾಗಿ 130 ದಿನಗಳ ಕಾಲ ಬೇಸಿಗೆ ಬೆಳೆಗೆ ನೀರು ಹರಿಸಬೇಕು, ಈಗ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತ ಮುಖಂಡರು, ರೈತರು ಸಹ ವಾಸ್ತವ ಅರಿಯಲಿ ಎಂದು ದಾವಣಗೆರೆ ತಾ. ಕೈದಾಳೆ ಗ್ರಾಮದ ಅಚ್ಚುಕಟ್ಟು ರೈತರು ಮನವಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೈದಾಳೆ ಗ್ರಾಮದ ಮುಖಂಡ ಶಿವಶಂಕರ ಕೈದಾಳೆ, ಪ್ರತಿ ಮಳೆಗಾಲದಲ್ಲಿ ಜೂನ್‌ನಲ್ಲಿ ಮಳೆಯಾಗುತ್ತಾ ಬಂದಿದ್ದು, ಆಗ ಡ್ಯಾಂಗೆ 25-30 ಸಾವಿರ ಕ್ಯೂಸೆಕ್ ಒಳಹರಿವು, ಜೂನ್ ಅಂತ್ಯಕ್ಕೆ ನೀರಿನ ಶೇಖರಣೆ 165 ರಿಂದ 170 ಅಡಿಗೆ ಬರುತ್ತಿತ್ತು. ಆಗ ಜುಲೈ ಮೊದಲವಾರವೇ ಭದ್ರಾ ಕಾಡಾ ಸಮಿತಿ ಸಭೆ ನಡೆಸಿ, ನೀರು ಬಿಡುವ ವೇಳಾಪಟ್ಟಿ ಸಿದ್ಧಪಡಿಸುತ್ತಿತ್ತು ಎಂದರು.
ಡ್ಯಾಂಗೆ ಒಳ ಹರಿವು ಕಡಿಮೆ ಇದ್ದಾಗಲೂ ಭತ್ತದ ಬೆಳೆಗೆ ನೀರು ಹರಿಸುವಂತೆ ಹಿರಿಯ ಮುಖಂಡರು, ಮಾಜಿ ಸಚಿವರು ಹೋರಾಟ ಮಾಡುತ್ತಿರುವುದು ಸರಿಯಲ್ಲ. ನಾವು ಪಕ್ಷಾತೀತವಾಗಿ ಭದ್ರಾ ಡ್ಯಾಂನಿಂದ ನೀರು ಬಿಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಪ್ರಮುಖ ನಾಲ್ಕೈದು ಪಕ್ಷದವರಿಂದಲೂ ಈಗ ನಾಲೆಗೆ ನೀರು ಬಿಡಬಾರದು ಎಂಬ ಬೇಡಿಕೆ ಮುಂದಿಟ್ಟುಕೊಂಡು, ಅಚ್ಚುಕಟ್ಟು ಪ್ರದೇಶದ ಗ್ರಾಮಗಳು, ರೈತರು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಸೆಪ್ಟಂಬರ್ ಕೊನೆಯ ವಾರ ನಾಟಿ ಮಾಡಬೇಕು, ಇದರಿಂದ ಭತ್ತದ ಇಳುವರಿಯೂ ಬರುವುದಿಲ್ಲ. ಈಗಲೇ ನಾಲೆಗೆ ನೀರು ಹರಿಸದೇ, ಜನವರಿಯಿಂದ ಸತತ 120 ದಿನ ನೀರು ಹರಿಸಿದರೆ, ಭತ್ತದ ಇಳುವರಿಯೂ ಹೆಚ್ಚುತ್ತದೆ ಎಂದು ವಿವರಿಸಿದರು.
ಈಗಲೇ ನೀರು ಬಿಡುವಂತೆ ಹೋರಾಟ ಮಾಡುತ್ತಿರುವ ಹಿರಿಯ ಮುಖಂಡರು ಡ್ಯಾಂನಿಂದ ಈಗ ನಾಲೆಗೆ ನೀರು ಬಿಟ್ಟರೆ ಅನುಕೂಲವೇ, ಅನಾನುಕೂಲವೇ ಎಂಬುದನ್ನು ಕೃಷಿ ಮತ್ತು ತೋಟಗಾರಿಕೆ ತಜ್ಞರು, ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಿ, ವಾಸ್ತವಾಂಶ ತಿಳಿಯಬೇಕು. ಸರ್ಕಾರ ಒತ್ತಡಕ್ಕೆ ಸಿಲುಕಿ ಈಗ ನಾಲೆಗೆ ನೀರು ಹರಿಸುವ ಕೆಲಸ ಮಾಡಬಾರದು ಎಂದು ಶಿವಶಂಕರ ಕೈದಾಳೆ ಮನವಿ ಮಾಡಿದರು.
ಭದ್ರಾ ಡ್ಯಾಂನಲ್ಲಿ 150 ಅಡಿ ನೀರು ಇದ್ದಾಗಲೇ ನಾಲೆಗೆ ನೀರು ಹರಿಸಿದ ನಿದರ್ಶನವಿದೆಯೆಂದು ಸಮರ್ಥಿಸಿಕೊಳ್ಳುವವರು ಆಗ ಮಳೆಯೂ ಸಮೃದ್ಧವಾಗಿ ಬರುತ್ತಿದ್ದುದನ್ನು ಮರೆಯಬಾರದು. 2023-25ರಲ್ಲೂ ಈಗಿರುವ ರೀತಿಯಲ್ಲೇ ಬರ ಆವರಿಸಿತ್ತು. ಈಗ ಬರದಲ್ಲಿ ಮಳೆ ಇಲ್ಲದೇ ರೈತರು ಪರಿತಪಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಮುಖಂಡರು ಮಾತಾಡಬೇಕು. ದಾವಣಗೆರೆ ತಾ. ತೊಗಲೇರಿಯಿಂದ ಡೈವರ್ಟ್ ಆಗಿ ತಮ್ಮ ಭಾಗಕ್ಕೆ ನೀರೇ ಬರುವುದಿಲ್ಲ. ಇದನ್ನೂ ಮರೆಯಬೇಡಿ.
.................
ದಾವಣಗರೆಯಲ್ಲಿ ಮಂಗಳವಾರ ಕೈದಾಳೆ ಗ್ರಾಮದ ಮುಖಂಡ ಶಿವಶಂಕರ ಕೈದಾಳೆ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.