ಹುಬ್ಬಳ್ಳಿ: ಮುಂದಿನ 3 ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಸ್ಥಳೀಯ ನಾಯಕರು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಿಶ್ರಮಿಸದೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಟಿಕೆಟ್ ಯಾರಿಗೆ ಕೊಟ್ಟರೂ ಅವರನ್ನು ಗೆಲ್ಲಿಸಿಕೊಂಡು ಬರುವುದು ಕಾರ್ಯಕರ್ತರ ಕರ್ತವ್ಯ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು.
ಗುರುವಾರ ಇಲ್ಲಿಯ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರ, ನಾಯಕರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಭ್ರಷ್ಟ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ನಾವೆಲ್ಲರೂ ಹೋರಾಡುವ ಮೂಲಕ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂದರು.ಈ ಹಿಂದೆ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸುವ ಕಾರ್ಯ ಯಶಸ್ವಿಯಾಗಿದೆ. ಇದರಿಂದ ಬಿಜೆಪಿ ನಾಯಕರಿಗೆ ಭಯಪಡುವಂತಾಗಿದೆ. ಈಗ ಎರಡನೇ ಹಂತದ ಭಾರತ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ್ದು, ಇದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.
ಭಾರತ ಜೋಡೋ ನ್ಯಾಯ ಯಾತ್ರೆ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯುವ ಅಸ್ತ್ರವಾಗಿದೆ. ಈ ಮೂಲಕ ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಲಿದ್ದಾರೆ. ಇದಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು ಎಂದರು.10 ದಿನದಲ್ಲಿ ನೇಮಕ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರ ಸಾಕಷ್ಟು ದುಡಿದಿದ್ದಾರೆ. ಆದ್ದರಿಂದ ವಿವಿಧ ನಿಗಮ ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರನ್ನೂ ನೇಮಿಸಲು ನಿರ್ಧರಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ, ಕಾಡಾ, ಆರಾಧನಾ ಸಮಿತಿ ಸೇರಿದಂತೆ ವಿವಿಧ ನಿಗಮ ಮಂಡಳಿಗಳಿಗೆ ಸದ್ಯದಲ್ಲಿ ಆಯ್ಕೆ ಮಾಡಲಾಗುವುದು. ಈ ಹಿನ್ನೆಲೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಒಬ್ಬ ಕೋ-ಆರ್ಡಿನೇಟರ್ ಅವರನ್ನು ನೇಮಿಸಲು ಜಿಲ್ಲಾಧ್ಯಕ್ಷರಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.ಮಾಜಿ ಸಂಸದ ಐ.ಜಿ. ಸನದಿ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಸದಾನಂದ ಡಂಗನವರ, ಮೋಹನ ಲಿಂಬಿಕಾಯಿ, ಪ್ರಕಾಶಗೌಡ ಪಾಟೀಲ, ನಾಗೇಶ ಕಲಬುರ್ಗಿ, ದೀಪಾ ಗೌರಿ, ಸ್ವಾತಿ ಮಳಗಿ, ಸುವರ್ಣ ಕಲ್ಲಕುಂಟ್ಲಾ ಇದ್ದರು.