- ಬಂಜಾರ ಯುವಜನತೆಗೆ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ - - - ಹರಿಹರ: ಸರ್ಕಾರಿ, ಖಾಸಗಿ ನೌಕರಿಗಾಗಿ ಕಾಯಬೇಡಿ. ನಿಮಗಾಗಿ ಸಾಕಷ್ಟು ಉದ್ಯಮಗಳು ಕಾದಿವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ನಗರದ ಹೊರವಲಯದ ಮೈತ್ರಿವನದಲ್ಲಿ ಬಂಜಾರ ಯುವಜನತೆಗೆ ರಾಜ್ಯಮಟ್ಟದ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನೆಲೆ ಇಲ್ಲದೇ ಬದುಕಿದ ಬಂಜಾರ ಸಮಾಜಕ್ಕೆ ನೀವು ಇದನ್ನೇ ಧರಿಸಿ, ಇದನ್ನೇ ಊಟ ಮಾಡಿ, ನೀವು ಊರ ಹೊರಗೆ ಬದುಕಬೇಕು ಎಂದು ಬೇಲಿ ಹಾಕಲಾಗಿತ್ತು. ಸ್ವಾತಂತ್ರ‍್ಯಾನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆಯುವ ಮೂಲಕ ಶೋಷಿತ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದಿಂದ ವೈಯಕ್ತಿಕ ಫಲಾನುಭವಿಗೆ ಸೌಲಭ್ಯವಿಲ್ಲ. ಆದರೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸೌಲಭ್ಯ ಪಡೆಯಬಹುದು. ಆದರೆ, ಅಂಬೇಡ್ಕರ್ ನಿಗಮದಿಂದ ಬಂಜಾರ ಸಮುದಾಯದವರಿಗೆ ರಾಜ್ಯದಲ್ಲಿ ಕೇವಲ 11 ಕೊಳವೆಬಾವಿ, 6 ಕಾರು ಪಡೆಯಲು ಮಾತ್ರ ಸಾಧ್ಯವಾಗಿದೆ. ಸರ್ಕಾರ ನೌಕರಿಯಲ್ಲಿ ಬಂಜಾರ ಸಮಾಜಕ್ಕೆ ಶೇ.18ರಷ್ಟು ಮೀಸಲು ನೀಡಬೇಕು. ಖಾಸಗಿ ಕಂಪನಿಗಳು ತಮಗೆ ಬೇಕಾದವರಿಗೆ ಕೆಲಸ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.ಅನಂತರ ನಾಯಕತ್ವ ರೂಪುಗೊಳ್ಳುವ ಬಗೆ ಹೇಗೆ, ಬಂಜಾರ ಅಸ್ಮಿತೆ ಮತ್ತು ಹೆಜ್ಜೆ ಗುರುತು, ಉದ್ಯಮಶೀಲತೆ ಸವಲತ್ತುಗಳ ವಿವರಗಳು ಎಂಬ ಗೋಷ್ಠಿಗಳು ನಡೆದವು.
ಎಂಬಿವಿ ಜಿಲ್ಲಾ ಸಂಚಾಲಕ ಲಕ್ಷ್ಮಣ ರಾವತ್, ನ್ಯಾಯವಾದಿ ಎನ್.ಅನಂತ ನಾಯ್ಕ, ಸಂಯೋಜಕ ಗಣೇಶ್ ನಾಯ್ಕ, ನಂಜಾ ನಾಯ್ಕ, ಮಹಿಳಾ ರಾಜ್ಯಧ್ಯಕ್ಷೆ ಶೈಲಜಾ ಬಾಯಿ, ಕರವೇ ತಾಲೂಕು ಅಧ್ಯಕ್ಷ ಶಶಿ ನಾಯ್ಕ, ಮಂಜು ನಾಯ್ಕ, ಉಪಸ್ಥಿತರಿದ್ದರು.- - - -ಫೋಟೋ:
ಕಾರ್ಯಾಗಾರವನ್ನು ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಸಂಚಾಲಕ ಲಕ್ಷ್ಮಣ ರಾವತ್ ಇತರರು ಇದ್ದರು.