ತಾಲೂಕು ಮಟ್ಟದ ಅಧಿಕಾರಿಗಳು ರೈತರು, ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಜವಾಬ್ದಾರಿಯುತವಾಗಿ ಕೆಲಸ ಮಾಡಿ ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಾಗ ಖಾಲಿ ಮಾಡಿ. ರೈತರಿಂದ ಕೆಲ ಇಲಾಖೆಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಇದೇ ರೀತಿ ಮುಂದುವರೆದರೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕು ಮಟ್ಟದ ಅಧಿಕಾರಿಗಳು ರೈತರು, ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಜವಾಬ್ದಾರಿಯುತವಾಗಿ ಕೆಲಸ ಮಾಡಿ ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಾಗ ಖಾಲಿ ಮಾಡಿ. ರೈತರಿಂದ ಕೆಲ ಇಲಾಖೆಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಇದೇ ರೀತಿ ಮುಂದುವರೆದರೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ನಗರದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಕರೆದಿದ್ದ ತಾಲೂಕು ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯ ಪಿಡಿಒ, ಸರ್ವೆ ಅಧಿಕಾರಿಗಳ ಮೇಲೆ ರೈತರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸುಖಾಸುಮ್ಮನೆ ದಾಖಲಾತಿಗಾಗಿ ಅವರನ್ನು ಅಲೆದಾಡಿಸುತ್ತಿದ್ದೀರಿ, ನೀವೇ ರೈತರ ಬಳಿ ಹೋಗಿ ಕೆಲಸ ಮಾಡಿಕೊಡಬೇಕು. ಸರ್ಕಾರ ನಿಮಗೆ ಸಂಬಳ ಕೊಡುತ್ತಿರುವುದು ಕಾಫಿ, ಟೀ ಕುಡಿದು ಮನೆಗೆ ಹೋಗುವುದಕ್ಕಲ್ಲ. ಯಾವ ಗ್ರಾಮ ಪಂಚಾಯಿತಿಗೆ ಹೋದರೂ ಅಲ್ಲಿನ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರ ಮೇಲೆ ದೂರು ಹೇಳುತ್ತಿದ್ದಾರೆ. ನಿಮ್ಮ ಮೇಲೆ ಪದೇ ಪದೇ ದೂರುಗಳು ಬರುತ್ತಿದ್ದರೆ ಜಾಗ ಖಾಲಿ ಮಾಡಿಸುತ್ತೇನೆ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಗರಂ ಆದರು. ತಾಲೂಕು ಹಾಗೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಿದ್ದು ಶೆಟ್ಟಿಹಳ್ಳಿ, ನ್ಯಾಕೇನಹಳ್ಳಿ ಸೇರಿದಂತೆ ನಗರದ ಮೂರು ವಾರ್ಡ್‌ಗಳಲ್ಲಿ ಮಾತ್ರ ನೀರಿನ ಸಮಸ್ಯೆಯಿದ್ದು ಇಲ್ಲಿ ಹೊಸ ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗಿದೆ. ಇದು ಬಿಟ್ಟರೆ ಬೇರೆಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ತಿಳಿಸಿದ ಶಾಸಕರು, ಬೀದಿ ನಾಯಿ ಹಾವಳಿ ತಡೆಗಟ್ಟಲು ಈಗಾಗಲೇ ತಾಲೂಕು ಪಂಚಾಯಿತಿ, ನಗರಸಭೆ, ಪಶು ಇಲಾಖೆಗೆ ಜವಾಬ್ದಾರಿ ನೀಡಿದ್ದು ಬೀದಿನಾಯಿಗಳಿಗೆ ಈಗಾಗಲೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ರಮವಹಿಸಲಾಗುವುದು ಎಂದರು. ತಾಲೂಕಿನಲ್ಲಿ ಜಲ ಜೀವನ್ ಯೋಜನೆ ಕಾಮಗಾರಿ ಅದ್ವಾನವಾಗಿದ್ದು ಕೆಲವರು ದೂರವಾಣಿ ಮೂಲಕ ದೂರು ನೀಡುತ್ತಿದ್ದಾರೆಂದು ಕುಡಿಯುವ ನೀರಿನ ಎಇಇ ನಾಗೇಂದ್ರರವರನ್ನು ಕೇಳಿದರು. ಅದಕ್ಕೆ ಅವರು ಸಮಸ್ಯೆಯನ್ನು ಸರಿಪಡಿಸುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ನಿರ್ದೇಶಕ ಡಾ. ಪವನ್ ಮಾತನಾಡಿ ಈ ಬಾರಿ ವಾಡಿಕೆ ಮಳೆಗಿಂತ ಶೇ. 79ರಷ್ಟು ಮಳೆ ಹೆಚ್ಚಾಗಿದೆ. ಈಗಾಗಲೇ ಎರಡು ಸಾವಿರ ಹೆಕ್ಟೇರ್‌ನಲ್ಲಿ ಪೂರ್ವ ಮುಂಗಾರು ಬೆಳೆಗಳು ಬಿತ್ತನೆಯಾಗಿದೆ. ರೈತರು ರಾಗಿ ಬಿತ್ತನೆಗೆ ಭೂಮಿ ಸಿದ್ದತೆ ಮಾಡಿಕೊಳ್ಳುತ್ತಿದ್ದು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಎಂ.ಆರ್.೬ ರಾಗಿ ತಳಿ ಸೇರಿದಂತೆ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಂದೀಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿಗಳ ಕಡಿವಾಣಕ್ಕೆ ಅಗತ್ಯ ಕ್ರಮವಹಿಸಲಾಗಿದ್ದು ಚುಚ್ಚುಮದ್ದು ಮಾಡಲಾಗುತ್ತಿದೆ. ನಮ್ಮ ಇಲಾಖೆ ವತಿಯಿಂದ 45ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು 30ಸಾವಿರ ಚರ್ಮಗಂಟು ರೋಗದ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ನಮ್ಮಲ್ಲಿ ಮೇವಿನ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಕೆ. ಷಡಕ್ಷರಿ, ಅಧಿಕಾರಿಗಳು ಬೇಜವಾಬ್ದಾರಿ ಬಿಟ್ಟು ಕೆಲಸ ಮಾಡಬೇಕು. ನೀವು ಕೆಲಸ ಮಾಡದಿದ್ದರೆ ನನ್ನನ್ನು ಜನ ಪ್ರಶ್ನಿಸುತ್ತಾರೆ. ನೀವು ನನಗೆ ಸಮರ್ಪಕ ಮಾಹಿತಿ ನೀಡದಿದ್ದರೆ ಸರ್ಕಾರ ಮಟ್ಟದ ಸಭೆಯಲ್ಲಿ ಮಾತನಾಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಓ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಬೆಸ್ಕಾಂ ಎಇಇ ಮನೋಹರ್, ಆಹಾರ ಇಲಾಖೆಯ ರೇಣುಕಾಪ್ರಸಾದ್, ತಾಲೂಕು ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಮಲ್ಲಿಕಾರ್ಜುನ್ ಸೇರಿದಂತೆ ಗ್ರಾ.ಪಂ ಪಿಡಿಓಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.