ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆ ಮನುಷ್ಯನ ಹುಡುಗಾಟಿಕೆಯ ಮಾತುಗಳನ್ನು ಮಾಧ್ಯಮದವರು ಗಂಭೀರವಾಗಿ ತೆಗೆದುಗೊಳ್ಳಬೇಡಿ. ಏನಾದರೂ ಗಂಭೀರತೆ ಇರಬೇಕಲ್ಲ, ಅವರ ಮಾತಿಗೆ ಎಂದು ಬಿಜೆಪಿ ಸರ್ಕಾರದ ಭ್ರಷ್ಟಚಾರದ ಬಗ್ಗೆ ಶಾಸಕ ಯತ್ನಾಳ ಹೇಳಿಕೆಗೆ ವಿರುದ್ದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.ಬಾಗಲಕೋಟೆಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಲ್ಲಿ ಶಾಸಕನಾಗಿದ್ದವನೇ, ಅವರು ಅಲ್ಲಿ ಶಾಸಕರಾಗಿದ್ದವರೆ. ಆ ಇಲಾಖೆಗೆ ₹40 ಸಾವಿರ ಕೋಟಿ ಬಜೆಟೇ ಇಲ್ಲ ಎಂದರಲ್ಲದೇ, ದಾಖಲಾತಿಯನ್ನಾದರೂ ಕೊಡಬೇಕಲ್ಲ. ನಾಲಿಗೆ ಇದೆ ಎಂದು ಏನು ಬೇಕಾದ್ರು ಮಾತಾಡಬಹುದಾ? ಎಂದು ಪ್ರಶ್ನಿಸಿಸಿದರು.
ಮನುಷ್ಯನಿಗೆ ಭಗವಂತ ನಾಲಿಗೆ ಯಾಕೆ ಕೊಟ್ಟಿದ್ದಾನೆ. ಒಳ್ಳೆಯದನ್ನು ಮಾತಾಡು, ಸತ್ಯವನ್ನೇ ಮಾತಾಡು ಎಂದು ಕೊಟ್ಟಿದ್ದಾನೆ. ಆದರೆ, ನನ್ನ ಸ್ವಾರ್ಥಕೊಸ್ಕರ ಏನ್ ಬೇಕಾದರೂ ಮಾತಾಡುತ್ತೇನೆ ಅಂದರೆ ಹೇಗೆ?. ಪಕ್ಷದಲ್ಲಿ ನನಗಿಂತ ಸಾವಿರ ಜನ ಶಕ್ತಿವಂತರಿದ್ದಾರೆ. ಆದರೆ, ಪಕ್ಷ ನನ್ನ ಗುರುತಿಸಿ ರೈತ ಮೋರ್ಚಾ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ನನಗೆ ಸಿಕ್ಕಿಲ್ಲ, ಅಂದ್ರೆ ನನ್ನನ್ನ ನಾನು ಸುಟ್ಟುಕೊಳ್ಳಲಿಕ್ಕೂ ತಯಾರು, ಅಹಂ ಬ್ರಹ್ಮಾಸ್ಮಿ, ನನಗೆ ಸಿಕ್ಕಿಲ್ಲ ಅಂದ್ರೆ ನನ್ನನ್ನ ನಾನು ಸುಟ್ಟುಕೊಂಡು ಸಾಯಿತಿನಿ ಎಂಬ ಅರ್ಥವಾಗುತ್ತದೆ ಎಂದರು.ರಾಜ್ಯದ ಸೋಶಿಯಲ್ ಮಿಡಿಯಾ ತೆಗೆದು ನೋಡಿ ಒಂಚೂರು. ಯಾವ ರೀತಿ ಜನ ಅವರಿಗೆ ಉಗಿತಿದ್ದಾರೆ ಅಂತಾ ನೋಡಿ. ನಾಚಿಕೆ ಇರಬೇಕಪ್ಪ, ಅವರಿಗೆ ನಾಚಿಕೆ ಇಲ್ಲ ಅಂದ್ರೆ ಏನು ಮಾಡೋದು, ಮೂರು ಬಿಟ್ಟವರಿಗೆ. ಅವ್ರಿಗೆ ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಪಂಚಮಸಾಲಿ ಶ್ರೀಗೆ ಪಂಚ್ ಕೊಟ್ಟ:ಯತ್ನಾಳ ಪರ ಪಂಚಮಸಾಲಿ ಶ್ರೀಜಯಮೃತ್ಯುಂಜಯ ಸ್ವಾಮೀಜಿ ಅವರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ನಡಹಳ್ಳಿ, ಒಬ್ಬ ಸ್ವಾಮಿಗಳಾದವರು ಹೇಗಿರಬೇಕು ಅಂದರೆ, ಸಿದ್ದೇಶ್ವರ ಶ್ರೀಗಳು ಹಾಗೂ ಸಿದ್ದಗಂಗಾ ಶ್ರೀಗಳಂತಹ ಮಹಾಸ್ವಾಮೀಜಿಗಳನ್ನು ನೋಡಿ ಕಲಿತುಕೊಳ್ಳಬೇಕು. ಸ್ವಾಮೀಜಿಗಳು ಸರ್ವಸ್ವವನ್ನು ಸಮಾಜಕ್ಕೆ ತ್ಯಾಗ ಮಾಡಿರಬೇಕು. ಅದು ಬಿಟ್ಟು, ಯಾವುದೇ ವ್ಯಕ್ತಿಯನ್ನು, ಯಾವುದೇ ಸಮಾಜವನ್ನು ಯಾವುದೇ ಒಂದು ಜಾತಿಯನ್ನು ಹಿಡಿದುಕೊಂಡು, ಅದನ್ನು ಸಮಾಜದಲ್ಲಿ ಒಂದು ದಿಕ್ಕಿನಲ್ಲಿ ಹೋರಾಟ ಮಾಡೋರನ್ನು ನಾನು ಸ್ವಾಮೀಜಿ ಅಂತ ಕರೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಮಠದಲ್ಲಿ ಓದಿ ಬೆಳೆದಿದ್ದೇನೆ. ಕರ್ನಾಟಕದಲ್ಲಿ 6800 ಮಠಗಳಿವೆ. ಸುಮಾರು 5 ಸಾವಿರ ಮಠಗಳ ಸ್ವಾಮೀಜಿಗಳ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ನಮ್ಮ ವೀರಶೈವ ಲಿಂಗಾಯತ ಸಮಾಜ ಆಗಲಿ, ಇನ್ನೊಂದು ಸಮಾಜ ಆಗಲಿ, ಉಪ ಜಾತಿಯ ಮೇಲೆ ಇನ್ನೊಂದರ ಮೇಲೆ ಅದನ್ನು ಕೊಡು, ಇದನ್ನು ಕೊಡು ಎಂದು ಯಾವತ್ತು ಸಮಾಜ ಕೇಳುವುದಿಲ್ಲ. ನಮ್ಮ ಸ್ವಾರ್ಥಕೊಸ್ಕರ ನಮಗಿಷ್ಟ ಬಂದಂತೆ ನಾವು ಮಾಡುದ್ದೇವೆ ಅಷ್ಟೇ. ಇದು ಆಗಬಾರದು ಅನ್ನೋದು ನನ್ನ ಉದ್ದೇಶ ಎಂದು ನಡಹಳ್ಳಿ ಹೇಳಿದರು.