ಶ್ರೀರಂಗಪಟ್ಟಣ ದಸರಾಗೆ ದೇಗುಲದ ಹುಂಡಿ ಹಣ ಬಳಸಬೇಡಿ: ಕಿರಂಗೂರು ಪಾಪು

KannadaprabhaNewsNetwork |  
Published : Sep 08, 2025, 01:00 AM IST
7ಕೆಎಂಎನ್ ಡಿ17 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಬ, ರಂಗನಾಥ ಸ್ವಾಮಿ, ಆರತಿ ಉಕ್ಕಡ ಮುಜರಾಯಿ ದೇವಾಲಯಗಳಿಂದ ಹಿಂದಿನಿಂದಲೂ ಸುಮಾರು 30 ರಿಂದ 35 ಲಕ್ಷ ಹುಂಡಿ ಹಾಗೂ ಭಕ್ತಾದಿಗಳು ದೇವರಿಗೆ ಭಕ್ತಿಯಿಂದ ನೀಡುವ ಕಾಣಿಕೆ ರೂಪದಲ್ಲಿ ಹಣವನ್ನು ಯಾವುದೋ ಒಂದು ಬಾಂಬೆ ಡ್ಯಾನ್ಸ್ ಸೇರಿದಂತೆ ಇನ್ನಿತರೆ ರಸಮಂಜರಿ ಕಾರ್ಯಕ್ರಮಕ್ಕೆ ವ್ಯಯ ಮಾಡುವುದು ಬೇಸರದ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಜರಾಯಿ ದೇವಾಲಯಗಳ ಹುಂಡಿಗಳ ಹಣ ಬಳಕೆ ಮಾಡಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆಚರಿಸಬಾರದು ಎಂದು ರೈತ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಸರಾ ಆಚರಣೆಗಾಗಿ ಮುಜರಾಯಿ ದೇವಾಲಯಗಳ ಹುಂಡಿಗೆ ಕೈ ಹಾಕಿದರೆ ಜನತೆಯ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಲೂಕಿನ ನಿಮಿಷಾಂಬ, ರಂಗನಾಥ ಸ್ವಾಮಿ, ಆರತಿ ಉಕ್ಕಡ ಮುಜರಾಯಿ ದೇವಾಲಯಗಳಿಂದ ಹಿಂದಿನಿಂದಲೂ ಸುಮಾರು 30 ರಿಂದ 35 ಲಕ್ಷ ಹುಂಡಿ ಹಾಗೂ ಭಕ್ತಾದಿಗಳು ದೇವರಿಗೆ ಭಕ್ತಿಯಿಂದ ನೀಡುವ ಕಾಣಿಕೆ ರೂಪದಲ್ಲಿ ಹಣವನ್ನು ಯಾವುದೋ ಒಂದು ಬಾಂಬೆ ಡ್ಯಾನ್ಸ್ ಸೇರಿದಂತೆ ಇನ್ನಿತರೆ ರಸಮಂಜರಿ ಕಾರ್ಯಕ್ರಮಕ್ಕೆ ವ್ಯಯ ಮಾಡುವುದು ಬೇಸರದ ಸಂಗತಿ ಎಂದು ಕಿಡಿಕಾರಿದ್ದಾರೆ.

ಭಕ್ತಾದಿಗಳು ಹಣ, ಚಿನ್ನ, ಬೆಳ್ಳಿ ಇನ್ನಿತರೆ ಕಾಣಿಕೆಗಳನ್ನು ಹಾಕುವುದು ದೇವಾಲಯದ ಅಭಿವೃದ್ಧಿಗೆ, ಪ್ರಸಾದ ರೂಪದ ಅನ್ನದಾಸೋಹ ಎಂಬ ಕಾರ್ಯಕ್ರಮಗಳಿಗೆ ಮಾತ್ರ. ಆದರೆ, ಈ ಹಣವನ್ನು ಸರ್ಕಾರ ಬೇರೆ ಬೇರೆ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ದೇವಾಲಯದ ಹಣವನ್ನು ದೇಗುಲಗಳಿಗೆ ಖರ್ಚು ಮಾಡಬೇಕು. ಅನ್ಯ ಕಾರ್ಯಕ್ರಮಗಳಿಗೆ ಉಪಯೋಗಿಸಬಾರದು ಎಂದು ಸ್ಪಷ್ಟವಾಗಿ ಈಗಾಗಲೇ ಸರ್ಕಾರ, ಮುಜರಾಯಿ ಇಲಾಖೆ ಹೇಳಿದೆ. ಇದರ ಬಗ್ಗೆ ಸುತ್ತೋಲೆಗಳಿವೆ. ಇಷ್ಟಾದರೂ ದೇವಾಲಯದ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಹುಂಡಿ ಹಣವನ್ನು ಅನ್ಯ ಕಾರ್ಯಕ್ರಮಗಳಿಗೆ ನೀಡಿರುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ದಸರಾ ಆಚರಣೆ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಣವನ್ನು ಕ್ರೋಢೀಕರಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಅದರಲ್ಲಿ ವಿಜೃಂಭಣೆಯ ದಸರಾ ಆಚರಿಸಲಿ. ವಿವಿಧ ಇಲಾಖೆಗಳಿಂದ ಹಣ ಸಂಗ್ರಹಿಸಿ ಆಚರಣೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಕಳೆದ ವರ್ಷ ನಿಮಿಷಾಂಬ ದೇವಾಲಯದಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಮತ್ತು ಇತರೆ ಹಬ್ಬಗಳಿಗೆ ಖರ್ಚು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕೇಳಿದರೆ ದೇವಾಲಯದ ಆಡಳಿತಾಧಿಕಾರಿ ಒಂದು ಸಲ ಏನು ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಾರೆ. ಇನ್ನೊಂದೆಡೆ ಲೆಕ್ಕಪರಿಶೋಧಕ ವರದಿಯಲ್ಲಿ ಸುಮಾರು 18,97,646 ರು.ಗಳನ್ನು ವ್ಯಯ ಮಾಡಿರುವುದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.

ಸುಳ್ಳು ಮಾಹಿತಿ ನೀಡಿ ಜನರನ್ನು ವಂಚಿಸುತ್ತಿರುವ ಆಡಳಿತಾಧಿಕಾರಿ ಕೃಷ್ಣ ಅವರ ಮೇಲೆ ಕಾನೂನು ಹೋರಾಟ ಮಾಡಲಾಗುವುದು. ಮುಜರಾಯಿ ಇಲಾಖೆ ದೇವಾಲಯಗಳ ಹುಂಡಿಗೆ ಕಾಣಿಕೆ ರೂಪದಲ್ಲಿ ಬರುವ ಆದಾಯಕ್ಕೆ ಕೈ ಹಾಕುವುದನ್ನು ನಿಲ್ಲಿಸಬೇಕು. ಇದರಿಂದ ಭಕ್ತಾದಿಗಳ, ಸಾರ್ವಜನಿಕರ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾಡಳಿತ, ಶಾಸಕರನ್ನು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ