ಗದಗ: ನಮಗೆ ಸಾಲಮನ್ನಾ ಬೇಡ ಸಮಯಕ್ಕೆ ಸರಿಯಾಗಿ ಬೀಜ-ಗೊಬ್ಬರ, ಬೆಳೆಗಳಿಗೆ ಸೂಕ್ತ ಬೆಲೆ ನೀಡಿದರೆ ಸಾಕು ನಾವೇ ಸರ್ಕಾರಕ್ಕೆ ಹಣ ಕೊಡುತ್ತೇವೆ. ಸಾವಯವ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಇರುವುದರಿಂದ ಬೆಳೆದ ಬೆಳೆ ಮಾರಾಟ ಮಾಡದೆ ಮನೆಯಲ್ಲಿ ಇಟ್ಟುಕೊಳ್ಳಬೇಕಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ಡಂಬಳ ನಾಕಾದ ಹತ್ತಿರವಿರುವ ನಂದಿವೇರಿ ಸಂಸ್ಥಾನ ಮಠದಲ್ಲಿ ಭಾನುವಾರ ಜರುಗಿದ ಔಷಧೀಯ ಸಸ್ಯ ಬೆಳೆಗಾರರ ಸಮಸ್ಯೆಗಳ ಕುರಿತು ರೈತ ಸಂವಾದ ಮತ್ತು ಹುಬ್ಬಳ್ಳಿಯಲ್ಲಿ ಜೂ. 8 ಮತ್ತು 9 ರಂದು ಜರುಗಲಿರುವ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ ಸಂರಕ್ಷಣೆ ಮತ್ತು ಕೃಷಿ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಔಷಧೀಯ ಸಸ್ಯಗಳ ಉಪಯೋಗ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ರೈತರೊಂದಿಗೆ ಸಂವಾದದಲ್ಲಿ ರೈತರು ತಮ್ಮ ಮನದಾಳದ ಮಾತು ಹೇಳಿದರು.
ನೀರಾವರಿ ಜಮೀನು ಇದೆ, ಕೃಷಿಯಲ್ಲಿ ಆಸಕ್ತಿಯು ಇದೆ ಆದರೆ ಔಷಧಿ ಸಸ್ಯ ಹೇಗೆ ಬೆಳೆಯಬೇಕು ಮತ್ತು ಮಾರಾಟ ಮಾಡಬೇಕೆಂದು ತಿಳಿಯುತ್ತಿಲ್ಲ. ಮಹಾಗನಿ ಗಿಡ ಬೆಳೆದು ಮೂರು ವರ್ಷ ತುಂಬಿವೆ ಮಾರುಕಟ್ಟೆ ಇಲ್ಲದೆ ಅನಿವಾರ್ಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಯಿತು. ಇಂತಹ ನೂರಾರು ಪ್ರಶ್ನೆಗಳು ರೈತರ ಮನಸ್ಸಿನಿಂದ ಅನಾವರಣಗೊಂಡವು.
ಈ ಸಂದರ್ಭದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕದಲ್ಲಿ ಕೃಷಿ ಆಶ್ರಮ ಸ್ಥಾಪನೆಯ ಆಂದೋಲನದ ರೂವಾರಿ ಡಾ. ಬಿ.ಎಂ. ನಾಗಭೂಷಣ ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿ, ಉತ್ತಮ ತಳಿಯ ಅಯ್ಕೆ, ಔಷಧಿ ಪ್ರಮಾಣ ಕಡಿಮೆ ಇರುವ ಸಸಿ, ನಾಟಿ ಮಾಡುವಾಗ ಸರಿಯಾಗಿ ತಯಾರಿ ಮಾಡದೆ ಇರುವುದರಿಂದ ಔಷಧಿ ಸಸ್ಯಗಳ ಬೆಳೆ ಕುಂಠಿತವಾಗಲು ಕಾರಣವಾಗಿದೆ ಅಲ್ಲದೆ, ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೂ. 8 ಮತ್ತು 9 ರಂದು ರಾಜ್ಯಮಟ್ಟದ ಕಾರ್ಯಾಗಾರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ್ ಮಾತನಾಡಿ, ಔಷಧಿ ಸಸ್ಯ ಉಳಿಸಿ ಬೆಳೆಸುವುದೇ ನಮ್ಮ ಉಸಿರಾಗಬೇಕು ಎಂದರು.
ಹುಬ್ಬಳ್ಳಿಯ ಡಾ. ಚರಂತಯ್ಯ ಹಿರೇಮಠ ಮಾತನಾಡಿ, ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಬಳಕೆ ಆಗುವ ಸಸ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಯಾವ ಸಮಯದಲ್ಲಿ ಸಸ್ಯಗಳನ್ನು ಬೆಳೆಯಬೇಕು, ಬೆಳೆಸಬೇಕು ಮತ್ತು ಎಲೆ ಕಾಂಡ ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಈ ಸಂವಾದ ಕಾರ್ಯಕ್ರಮದಲ್ಲಿ ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬಾಲಚಂದ್ರ ಜಾಬಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಗದಗ, ಕೊಪ್ಪಳ, ಹಾವೇರಿ, ಧಾರವಾಡ, ರಾಯಚೂರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಔಷಧೀಯ ಸಸ್ಯಗಳ ಬೆಳೆಗಾರರು, ಸಾವಯವ ಕೃಷಿಕರು, ವಿಜ್ಞಾನಿಗಳು, ತಜ್ಞರು, ಔಷಧೀಯ ಸಸ್ಯಗಳ ಮಾರುಕಟ್ಟೆ ತಜ್ಞರು, ನರ್ಸರಿಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ ಸಸಿ ಪೂರೈಕೆ ಮಾಡುವವರು, ಔಷಧೀಯ ಸಸ್ಯ ಬೆಳೆಗಾರರು, ಸಾಮಾನ್ಯ ರೈತರು, ಆಯುರ್ವೇದ ವೈದ್ಯರು, ಉಪನ್ಯಾಸಕರು, ಆಯುರ್ವೇದ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.