ಮಾದಕ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಾದಕ ವಸ್ತುಗಳ ಸೇವನೆ ಮಾರಾಟ ಮತ್ತು ಸಾಗಾಟ ತಡೆಗಟ್ಟುವ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಯುವಜನತೆ ಮೋಜಿಗಾಗಿ ಮಾದಕ ವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳದೇ ಕಷ್ಟಪಟ್ಟು ಅಧ್ಯಯನ ಮಾಡಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಯುವಜನತೆ ಮೋಜಿಗಾಗಿ ಮಾದಕ ವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳದೇ ಕಷ್ಟಪಟ್ಟು ಅಧ್ಯಯನ ಮಾಡಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಾದಕ ವಸ್ತುಗಳ ಸೇವನೆ ಮಾರಾಟ ಮತ್ತು ಸಾಗಾಟ ತಡೆಗಟ್ಟುವ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ನಡುವಳಿಕೆ ಬಗ್ಗೆ ತಂದೆ-ತಾಯಿ, ಗುರುಗಳು ಗಮನ ಹರಿಸುವ ಅವಶ್ಯಕತೆ ಇದೆ. ದೊಡ್ಡ ದೊಡ್ಡ ನಗರಗಳಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಡ್ರಗ್ಸ್ ತೆಗೆದುಕೊಂಡರೇ ನಿಮ್ಮ ಕನಸು, ಸಾಧನೆ ಹಾಳಾಗುತ್ತದೆ. ಕುಡಿತ ಚಟ, ಗಾಂಜಾ ಸೇವನೆಯಿಂದ ಜೀವಕ್ಕೆ ಕುತ್ತು ತರುತ್ತಿವೆ. ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಗಟ್ಟಿಯಾದ ನಿರ್ಧಾರ, ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದಾಗ ಯಾವುದೂ ಕೂಡಾ ಕಠಿಣವಲ್ಲ. ಸಾಮಾಜಿಕ ಪಿಡುಗಾಗಿರುವ ಮಾದಕ ವಸ್ತು ಸೇವನೆಯಿಂದ ವ್ಯಸನಿಗಳು, ಆರ್ಥಿಕ, ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕವಾಗಿ ಅಂಧಪಥನಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ದುಶ್ಚಟಗಳಿಂದ ದೂರ ಇರಬೇಕು ಎಂದು ತಿಳಿಸಿದರು.

ಡಿವೈಎಸ್‌ಪಿ ರವಿ ನಾಯ್ಕ, ಪಿಐ ಪಂಚಾಕ್ಷರಿ ಸಾಲಿಮಠ, ಪ್ರಾಚಾರ್ಯ ಬಸವರಾಜ ಕುರಿ, ಶಾಸಕ ಮಹಾಂತೇಶ ಕೌಜಲಗಿ ಹಾಗೂ ಉಪನ್ಯಾಸಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಬಿ.ಎಂ.ಕೊಳವಿ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಪುರಾಣಿಕಮಠ ನಿರೂಪಿಸಿದರು. ಉಪನ್ಯಾಸಕರಾದ ಎಚ್.ಆರ್.ಪಾಟೀಲ, ರಮೇಶ ಹುನಗುಂದ, ಬಿ.ಸಿ.ಅಡಕಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಅನುಶ್ರೀ ಬಿಜ್ಜನ್ನವರ, ಸೌಜನ್ಯ ಹಡಪದ, ಶೋಭಾ ಕದಂ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಟ ಪರಿಣಾಮದ ಕುರಿತು ಮಾರ್ಮಿಕವಾಗಿ ವಿವರಿಸಿದರು.

Share this article