ಕನ್ನಡಪ್ರಭ ವಾರ್ತೆ ಕೋಲಾರಪರೀಕ್ಷೆ ಎಂಬುದು ಯುದ್ದವಲ್ಲ, ಅದೊಂದು ಹಬ್ಬದಂತೆ ಸಂಭ್ರಮಿಸಬೇಕು. ಓದಿದ್ದನ್ನು ಅರ್ಥ ಮಾಡಿಕೊಂಡು ಮಲಗುವ ಮುನ್ನ ಮತ್ತೊಮ್ಮೆ ನೆನಪು ಮಾಡಿಕೊಂಡು ಮನಸ್ಸಿನಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಓ.ಮಲ್ಲಿಕಾರ್ಜುನ್ ತಿಳಿಸಿದರು.ತಾಲೂಕಿನ ಕ್ಯಾಲನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ೨೦೨೪-೨೫ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರೀಕ್ಷೆಯ ಕುರಿತ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟುಬಿಡಿ. ಓದುವುದು ಮತ್ತು ಬರೆಯುವುದು ಪ್ರೀತಿಯ ಕಾಯಕವಾದರೆ ಪರೀಕ್ಷೆಯ ಕುರಿತ ಭಯ ತನ್ನಿಂತಾನೆ ಮಾಯವಾಗುತ್ತದೆ. ಹಾಗೆ ಮಾಡಲು ಒಮ್ಮೆ ಪ್ರಯತ್ನಿಸಿ ನೋಡಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಓದಿದ ವಿಷಯವನ್ನು ನಿಮ್ಮದೇ ಪದಗಳಲ್ಲಿ ಬರೆದಿಡಿ. ಕಲಿತಿದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದರಿಂದ ಜ್ಞಾಪಕಶಕ್ತಿ ವೃದ್ಧಿಸುತ್ತದೆ. ಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ. ಕಲಿತ ವಿಷಯಗಳನ್ನು ಚಿತ್ರ, ನಕ್ಷೆಗಳ ಸಾರಾಂಶವನ್ನು ರೂಪಿಸಿ. ಇದು ನೆನಪಿಟ್ಟುಕೊಳ್ಳುವುದು ಮತ್ತಷ್ಟು ಸುಲಭವಾಗುತ್ತದೆ. ಇದಕ್ಕೆ ’ಮೈಂಡ್ ಮ್ಯಾಪ್’ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ಗಣಿತ ಸಂಪನ್ಮೂಲ ಶಿಕ್ಷಕಿ ಭಾಗ್ಯಲಕ್ಷ್ಮಿ, ವಿಜ್ಞಾನ ಸಂಪನ್ಮೂಲ ಶಿಕ್ಷಕರಾದ ಅಮರೇಶ್ ಬಾಬು, ಸಮಾಜ ವಿಜ್ಞಾನ ಸಂಪನ್ಮೂಲ ಶಿಕ್ಷಕರಾದ ರಾಮಲಿಂಗಪ್ಪ,ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಮೂರ್ತಿ, ಗೌರವಾಧ್ಯಕ್ಷ ಅನಿಲ್ ಕುಮಾರ್, ಅಮ್ಮನಲ್ಲೂರು ಚೌಡೇಶ್ವರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಮುನಿವೆಂಕಟಸ್ವಾಮಿ ಮದ್ದೇರಿ ಶಾಲೆಯ ಕೃಷ್ಣಮೂರ್ತಿ, ಕೆಪಿಎಸ್ ಕ್ಯಾಲನೂರು ಶಾಲೆಯ ಶಿಕ್ಷಕರಾದ ಸುಬ್ರಹ್ಮಣ್ಯಚಾರಿ ಹಾಜರಿದ್ದರು.