ಕೊಡಗು ವಿವಿ ಮುಚ್ಚುವ ನಿರ್ಧಾರ ಕೈಬಿಡಬೇಕು : ಇಲ್ಲವಾದರೆ ‘ಕೊಡಗು ಬಂದ್’ ಗೂ ಸಿದ್ಧ

KannadaprabhaNewsNetwork |  
Published : Feb 20, 2025, 12:48 AM IST
ಚಿತ್ರ : 19ಎಂಡಿಕೆ4 : ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಇದಕ್ಕೆ ಸ್ಪಂದಿಸದಿದ್ದಲ್ಲಿ ಕೊಡಗು ಬಂದ್‌ಗೂ ಸಿದ್ಧವಿರುವುದಾಗಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ಒದಗಿಸುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸುವುದಕ್ಕೆ ಪೂರಕವಾಗಿ, ಕಳೆದ ಎರಡು ದಶಕಗಳ ನಿರಂತರ ಪರಿಶ್ರಮದಿಂದ ಪಡೆದುಕೊಂಡ ''''''''ಕೊಡಗು ವಿಶ್ವ ವಿದ್ಯಾನಿಲಯ''''''''ವನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಇದಕ್ಕೆ ಸ್ಪಂದಿಸದಿದ್ದಲ್ಲಿ ಕೊಡಗು ಬಂದ್‌ಗೂ ಸಿದ್ಧವಿರುವುದಾಗಿ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994 ರಲ್ಲಿ ತಾನು ಶಾಸಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯನಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ವಿಶ್ವ ವಿದ್ಯಾಲಯದ ಶಾಖೆಯನ್ನು ಕೊಡಗಿನಲ್ಲಿ ಮಕ್ಕಳ ಹಿತದೃಷ್ಟಿಯಿಂದ ತೆರೆಯಬೇಕೆನ್ನುವ ವಿಚಾರವನ್ನು ಮಂಡಿಸುತ್ತಲೆ ಬಂದಿದ್ದೆ. ಈ ಹಿನ್ನೆಲೆಯಲ್ಲಿ 100 ಏಕರೆ ಪ್ರದೇಶದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಗೊಳ್ಳುವ ಮೂಲಕ ಕೊಡಗಿನ ಶಿಕ್ಷಣಾಕಾಂಕ್ಷಿ ಬಡ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಕೊಡಗು ವಿವಿಗೆ ಚಿಕ್ಕಾಸನ್ನು ನೀಡದಿದ್ದರು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಡಗು ವಿವಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ತಿಳಿಸಿದರು.

ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿತ ದೃಷ್ಟಿಯಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಧಮ್ಕಿ ಹಾಕಿ ಕೊಡಗು ವಿವಿಯನ್ನು ಉಳಿಸಿಕೊಳ್ಳಲಿ. ಕೊಡಗು ವಿವಿಯಷ್ಟು ಸೌಲಭ್ಯಗಳಾಗಲಿ ಜಾಗವಾಗಲಿ ಇಲ್ಲದ ಬೀದರ್ ವಿವಿಯನ್ನು ಈಶ್ವರ ಖಂಡ್ರೆಯವರು ಸರ್ಕಾರಕ್ಕೆ ಧಮ್ಕಿ ಹಾಕಿ ಉಳಿಸಿಕೊಂಡಿಲ್ಲವೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿ, ಸಿಎಂ ಕಾನೂನು ಸಲಹೆಗಾರರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲವಾದರೆ, ಮತ್ತೊಬ್ಬ ಶಾಸಕರು, ಉಪನ್ಯಾಸಕರು, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾರಾದರೂ, ವಿವಿ ಉಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲವೆಂದು ಕಟುವಾಗಿ ನುಡಿದರು.

ಕೊಡಗು ವಿವಿಗೆ ಸರ್ಕಾರ ಚಿಕ್ಕಾಸನ್ನು ನೀಡುವುದು ಬೇಡ, ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳಿಗಾಗಿ ಈಗಾಗಲೆ ಟಾಟಾ, ಇನ್ಫೋಸಿಸ್, ಎಸ್‌ಬಿಐಗಳನ್ನು ಸಂಪರ್ಕಿಸಿ ಮಾತುಕತೆಗಳನ್ನು ನಡೆಸಿರುವುದಾಗಿ ಅಪ್ಪಚ್ಚು ರಂಜನ್ ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕೊಡಗು ವಿವಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿ ಸಂಘ, ಹಳೆ ವಿದ್ಯಾರ್ಥಿ ಸಂಘ ಮತ್ತು ಸಂಘ ಸಂಸ್ಥೆಗಳ ಮೂಲಕ ಕಾಲೇಜು ಹಂತದಲ್ಲಿ ಪ್ರತಿಭಟನೆಗಳನ್ನು ರೂಪಿಸಲಾಗುತ್ತದೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜಿಲ್ಲಾ ಬಂದ್‌ಗೆ ಮುಂದಾಗುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಶಿಕ್ಷಣದ ಮೂಲಕ ರಾಷ್ಟ್ರದ ಅಭಿವೃದ್ಧಿ ಎನ್ನುವುದನ್ನು ಮನಗಾಣುವ ಮೂಲಕ ರಾಜ್ಯ ಸರ್ಕಾರ ಕೊಡಗು ವಿವಿಯನ್ನು ಮುಚ್ಚದೆ, ಅದಕ್ಕೆ 5 ಕೋಟಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು.

ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ಮಾತನಾಡಿ, ಕೊಡಗು ವಿವಿ ನಮ್ಮ ಹೆಮ್ಮೆಯಾಗಿದೆ. ಇದರ ಉಳಿವಿಗೆ ಪ್ರಬಲ ಹೋರಾಟ ರೂಪಿಸುವುದಾಗಿ ಹೇಳಿದರು.

ಮಾಜಿ ಎಂಎಲ್‌ಸಿ ಸುನೀಲ್ ಸುಬ್ರಮಣಿ ಮಾತನಾಡಿ, ಅಹಿಂದ ಮುಖ್ಯ ಮಂತ್ರಿಗಳೆಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು, ಕೊಡಗು ವಿವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಮತ್ತು ಹಿಂದುಳಿದ ಮಕ್ಕಳ ಬಗ್ಗೆ ಚಿಂತಿಸದೆ ವಿವಿ ಮುಚ್ಚಲು ಮುಂದಾಗಿರುವುದಾಗಿ ಲೇವಡಿ ಮಾಡಿ, ಮಕ್ಕಳ ಬಗ್ಗೆ ಕಾಳಜಿ ಇದ್ದಲ್ಲಿ ವಿವಿ ಉಳಿಸಿ ತೋರಿಸಲಿ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ