ಅಂತರ್ಜಲ ಕೊರತೆ: ನೀರಿನ ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸಿ: ತಾಲೂಕು ಇಒ ಎಚ್.ಡಿ.ನವೀನ್ ಕುಮಾರ್

KannadaprabhaNewsNetwork | Published : Feb 20, 2025 12:48 AM

ಸಾರಾಂಶ

ಕಳೆದ ವರ್ಷ ಅಧಿಕ ಮಳೆಯಾದರೂ ಮಲೆನಾಡಿನ ಬಾಗದಲ್ಲಿ ಅಂತರ್ಜಲ ಕಡಿಮೆಯಾಗಿದೆ. ಆದ್ದರಿಂದ ತಾಲ್ಲೂಕಿನಾದ್ಯಂತ ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ, ಬರ ನಿರ್ವಹಣೆ ಬಗ್ಗೆ ಚರ್ಚೆ । ಅಧಿಕಾರಿಗಳಿಗೆ ನಿರ್ದೇಶನ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕಳೆದ ವರ್ಷ ಅಧಿಕ ಮಳೆಯಾದರೂ ಮಲೆನಾಡಿನ ಬಾಗದಲ್ಲಿ ಅಂತರ್ಜಲ ಕಡಿಮೆಯಾಗಿದೆ. ಆದ್ದರಿಂದ ತಾಲ್ಲೂಕಿನಾದ್ಯಂತ ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಮಂಗಳವಾರ ತಾಪಂ ಸಾಮರ್ಥ್ಯಸೌಧದಲ್ಲಿ ತಹಸೀಲ್ದಾರ್ ತನುಜ ಟಿ.ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಬರ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿ, ಕಳೆದ ಬೇಸಿಗೆಯಲ್ಲಿ ಬಾರಿ ಎಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ತಲೆದೋರಿತ್ತು. ಈ ಬಾರಿ ಎಲ್ಲೆಲ್ಲಿ ಸಮಸ್ಯೆ ಉದ್ಭವವಾಗಬಹುದು ಎಂಬ ಗ್ರಾಮಗಳ ಪಟ್ಟಿ ಮಾಡಿ, ಸಮಸ್ಯೆ ಬರುವ ಮುಂಚೆಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಹಿಂದಿನ ವರ್ಷಕ್ಕಿಂತ ಈ ಬಾರಿ ಸಮಸ್ಯೆ ಜಾಸ್ತಿಯೇ ಆಗಬಹುದು. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತಹ ಸ್ಥಿತಿಯೂ ನಿರ್ಮಾಣವಾಗಬಹುದು. ಆದ್ದರಿಂದ ಯಾವ, ಯಾವ ಗ್ರಾಮಗಳಲ್ಲಿ ಸಣ್ಣಪುಟ್ಟ ಕುಡಿಯುವ ನೀರಿನ ಸಮಸ್ಯೆಗಳಿವೆ. ಅದನ್ನು ಈಗಿನಿಂದಲೇ ಪರಿಹರಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಮಾತನಾಡಿ, ಈ ಬಾರಿ ನಿಗದಿತ ಅವಧಿಗೆ ಮಳೆ ಬಾರದೇ ಹೋದರೆ ಮಾತ್ರ ತೊಂದರೆ ಆಗಲಿದೆ. ತೋಟಗಾರಿಕೆ ಬೆಳೆಗಳ ರೈತರಿಗೆ ನೀರು ಸಾಕಾಗುತ್ತಿಲ್ಲ. ಅತಿವೃಷ್ಟಿಯಡಿ ಪ್ರತೀ ಹೆಕ್ಟೇರ್‌ಗೆ 18 ಸಾವಿರ ರು. ಪರಿಹಾರ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್ ಮಾತನಾಡಿ, ಪ್ರವಾಸಿ ಮಂದಿರ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಇದೆ ಎಂದರು.

ಬಿಸಿಎಂ ಇಲಾಖೆ ಅಧಿಕಾರಿ ರಮೇಶ್, ಇಒ ಎಚ್.ಡಿ.ನವೀನ್‌ಕುಮಾರ್, ಕಡಹಿನಬೈಲು ಗ್ರಾಪಂ ಪಿಡಿಒ ವಿಂದ್ಯಾ, ತಹಸೀಲ್ದಾರ್ ತನುಜ ಟಿ.ಸವದತ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಡಿ.ನವೀನ್ ಕುಮಾರ್ ಇದ್ದರು.

ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ 14 ಮಂಗನ ಕಾಯಿಲೆ

ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್ ಸಭೆಗೆ ಮಾಹಿತಿ ನೀಡಿ, ಈ ವರ್ಷ ಮಂಗನ ಕಾಯಿಲೆ ಪ್ರಾರಂಭವಾಗಿದ್ದು ತಾಲೂಕಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ 2, ಹಿರೇಗದ್ದೆ-1, ಕರ್ಕೇಶ್ವರ-8, ಮುತ್ತಿನಕೊಪ್ಪ-2, ಆಡುವಳ್ಳಿಯಲ್ಲಿ 1 ಪ್ರಕರಣಗಳು ಪತ್ತೆ ಆಗಿದೆ. ಈಗಾಗಲೇ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗ್ರಾಪಂ ಮಟ್ಟದ ಟಾಸ್ಕ್ ಪೋರ್ಸ ಸಮಿತಿ ರಚಿಸಲಾಗಿದೆ. ಕಳೆದ ಬಾರಿ 24 ಮಂಗನ ಖಾಯಿಲೆ ಪ್ರಕರಣಗಳು ಕಂಡು ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಡೆಪಾ ಆಯಿಲ್ ದಾಸ್ತಾನಿದ್ದು ಕಾಡಿಗೆ ಹೋಗಿ ಬರುವ ರೈತರಿಗೆ, ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಯಿಲ್‌ನ್ನು ವಿತರಿಸಲಾಗಿದೆ. ಆಸ್ಪತ್ರೆಯಲ್ಲಿ 1450 ಡೆಫಾ ಆಯಿಲ್ ಬಾಟಲ್ ಲಭ್ಯವಿದೆ. ಎಲ್ಲಾ ರೀತಿಯ ಔಷಧಗಳು ಬೇಡಿಕೆಯಷ್ಟು ದಾಸ್ತಾನು ಇದೆ ಎಂದರು.

Share this article