ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಆದಿಚುಂಚನಗಿರಿ ಯುನಿವರ್ಸಿಟಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಜೀವ ಮತ್ತೊಬ್ಬರಿಗೆ ಆಸರೆಯಾಗಿರಲಿ’ ಎಂಬ ವಿನೂತನ ವಾಕಥಾನ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸತ್ತ ನಂತರವೂ ಬೇರೆ ಬೇರೆ ರೀತಿಯಲ್ಲಿ ನಾವು ಭೂಮಿ ಮೇಲೆ ಉಳಿಯಲು ಅವಕಾಶವಿದೆ. ಜಗತ್ತನ್ನು ನೋಡುವ ಕಣ್ಣುಗಳು, ದೇಹ ಶುದ್ಧೀಕರಣ ಮಾಡುವ ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳು, ಶ್ವಾಸಕೋಶ, ಹೃದಯಗಳನ್ನು ದಾನ ಮಾಡುವ ಮೂಲಕ ಸತ್ತ ನಂತರವೂ ಇನ್ನೊಬ್ಬರ ಬದುಕಿಗೆ ನೆರವಾಗಬಹುದು ಎಂದರು.ಅವಶ್ಯಕತೆ ಇರುವಂಥವರಿಗೆ ಅಂಗಾಂಗಗಳನ್ನು ದಾನ ಮಾಡುವ ಅರಿವಿನ ಕಾರ್ಯಕ್ರಮ ಆಯೋಜಿಸಿದ್ದು, ಇತ್ತೀಚಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಲಾಯಿತು. ಮಕ್ಕಳಿಗೆ ಅವರ ಅಪ್ಪಂದಿರು ಕಿಡ್ನಿ ದಾನ ಮಾಡಿದರು. 23-24 ವರ್ಷದ ಮಕ್ಕಳಿಗೆ 65- 70 ವರ್ಷದ ಅಪ್ಪಂದಿರು ದಾನ ಮಾಡುವಂತಹ ಸನ್ನಿವೇಶವನ್ನು ಈ ದಿನಮಾನಗಳಲ್ಲಿ ನಾವು ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕ ಶರತ್ ಬಚ್ಚೇಗೌಡ, ನಟ ಧ್ರುವಸರ್ಜಾ ಮಾತನಾಡಿದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಪಾರಿವಾಳ ಹಾರಿ ಬಿಡುವ ಮೂಲಕ ನಡಿಗೆಗೆ ಚಾಲನೆ ನೀಡಲಾಯಿತು. ಆದಿನಾಥ ರಸ್ತೆಯಿಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿವಿಧ ಮಠಗಳ ಮಠಾಧೀಶರು ಹಾಗೂ ಇತರೆ ಗಣ್ಯರೊಡಗೂಡಿ ಪ್ರಾರಂಭಗೊಂಡ ನಡಿಗೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ತಲುಪಿ, ನಂತರ ಬೆಳ್ಳೂರು ಕ್ರಾಸ್‌ನ ಸೇತುವೆ ಕೆಳಗಿನ ರಸ್ತೆಯ ಮೂಲಕ ಸುಮಾರು 5 ಕಿ.ಮೀವರೆಗೆ ಸಾಗಿ ವಾಪಸ್ ಆದಿಚುಂಚನಗಿರಿ ವಿವಿ ಆವರಣದ ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಬಳಿ ಅಂತ್ಯಗೊಂಡಿತು.
ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರಂಗನಾಥ್, ಎಚ್.ಕೆ.ಬಾಲಕೃಷ್ಣ, ಮಾಜಿ ಶಾಸಕ ಸುರೇಶ್ ಗೌಡ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಡಿಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಯು ಉಪ ಕುಲಪತಿ ಶ್ರೀಧರ್, ಆಸ್ಪತ್ರೆ ಮುಖ್ಯಸ್ಥ ಡಾ.ಶಿವಕುಮಾರ್, ಸಂಪರ್ಕಾಧಿಕಾರಿ ಧರ್ಮೇಂದ್ರ, ಮೃಜೇಶ್ ಸೇರಿದಂತೆ ಹಲವರು ಇದ್ದರು.