ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ- ಕುಶಾಲನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸರ್ವೀಸ್ ರಸ್ತೆ ವಿಚಾರವಾಗಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ರೈತರೊಂದಿಗೆ ಮೊದಲ ಸಭೆ ಯಶಸ್ವಿಯಾಗಿ ನಡೆಯಿತು.ತಾಲೂಕಿನ ಬೆಳಗೊಳ ಗ್ರಾಮದ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ನೂರಾರು ರೈತರೊಂದಿಗೆ ಸಭೆ ನಡೆಸಿದ ಮಾಜಿ ಶಾಸಕರು, ರೈತರು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಕೂಲಂಕುಷವಾಗಿ ಮನವಿ ಆಲಿಸಿದರು.
ಶ್ರೀರಂಗಪಟ್ಟಣ- ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಳೆದ 2019ರಲ್ಲಿ ಅಗತ್ಯ ಭೂ ಸ್ವಾಧೀನಕ್ಕೆ ಮುಂದಾದ ವೇಳೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಅಂದಿನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ರೈತರಿಗೆ ಸಭೆ ನಡೆಸಿ ಹಲವು ಆಮಿಷಗಳನ್ನವೊಡ್ಡಿ ನಮ್ಮ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದರು. ರೈತರಿಗೆ ಅಗತ್ಯ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸದಿರುವ ಬಗ್ಗೆ ಈಗಷ್ಟೇ ಅವರ ಸುಳ್ಳು ಭರವಸೆಗಳು ತಿಳಿಯುತ್ತಿವೆ ಎಂದು ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ರೈತರಿಗೆ 5 ವರ್ಷದ ಹಿಂದಿನ ಹಣ ನಿಗದಿ ಮಾಡಿ ಪ್ರತಿ ಗುಂಟೆಗೆ ಕೇವಲ 2.40 ಲಕ್ಷ ರು. ನೀಡಿ ಬಹಳ ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡಿದ್ದಾರೆ. ಜೊತೆಗೆ ಹೆಚ್ಚಿನ ಪರಿಹಾರಕ್ಕೆ ಕಾನೂನಾತ್ಮಕ ಹೋರಾಟಕ್ಕೆ ರೈತರು ಮುಂದಾದರೆ ಬರುವ ಹಣದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಹೆದ್ದಾರಿಯಿಂದಾಗಿ ನಮ್ಮ ಜಮೀನು ಎರಡು ಹೋಳಾಗಿರುವುದಲ್ಲದೆ, ಹಲವೆಡೆ 20 ಅಡಿಗೂ ಎತ್ತರದಲ್ಲಿ ಹೆದ್ದಾರಿ ಹಾದುಹೋಗುತ್ತಿದೆ. ಇದರಿಂದ ನಮ್ಮ ಜಮೀನಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಈ ವೇಳೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ರೈತರಿಂದ ಭೂಮಿ ಪಡೆಯುವ ವೇಳೆ ಜಿಲ್ಲಾ ಹಾಗೂ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಆಮೀಷವೊಡ್ಡಿ ಭೂಮಿ ಪಡೆದು ಇದೀಗ ರೈತರ ಸಮಸ್ಯೆ ಕೇಳದಿರುವುದು ದುರಂತ. ಜೊತೆಗೆ ಹೆಚ್ಚಿನ ಪರಿಹಾರ ಪಡೆಯಲು ರೈತರು ಕಾನೂನಾತ್ಮಕವಾಗಿ ಮುಂದಾದರೆ ಶೇ. 30ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಇದು ಇಡೀ ಸಮಾಜವೇ ತಲೆ ತಗ್ಗಿಸುವ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.ಇದೀಗ ಹೆಚ್ಚಿನ ಪರಿಹಾರ ಕೇಳುತ್ತಿದ್ದೀರಿ, ಆದರೆ, ಈಗಾಗಲೇ ಸಾಕಷ್ಟು ಮುಂದೆ ಹೋಗಿದ್ದು, ಮತ್ತೆ ಹೆಚ್ಚಿಗೆ ಹಣ ಪಡೆಯಲು ಸಾಧ್ಯವಿಲ್ಲ. ಈ ಭಾಗದಲ್ಲಿ ಹೆಚ್ಚಾಗಿ ಕಬ್ಬು, ಭತ್ತ ಬೆಳೆಯುವ ಭೂಮಿಯಾಗಿರುವುದರಿಂದ ಬೆಲೆ ಗಗನಕ್ಕೇರಿದೆ ಎಂದರು.
ಈ ಹಿಂದೆ ರೈತರಿಗೆ ಭರವಸೆ ನೀಡಿದಂತೆ ಹಲವು ರೈತರೊಂದಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮೂಲಕ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರನ್ನು ಭೇಟಿ ಮಾಡಿದ್ದೇವೆ. ಸಚಿವರು ಈ ಹೆದ್ದಾರಿಗೆ ಯಾವುದೇ ಸರ್ವೀಸ್ ರಸ್ತೆ ಬರುವುದಿಲ್ಲ. ಆದರೂ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಅಗತ್ಯ ಹಣ ಬಿಡುಗಡೆ ಮಾಡಿ ಸ್ಥಳೀಯ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭರವಸೆ ನೀಡಿದ್ದಾರೆ. ರೈತರು ಸಹ ಸರ್ವೀಸ್ ರಸ್ತೆಗೆ ಅಗತ್ಯವಿರುವ ಭೂಮಿ ನೀಡುವಂತೆ ತಮ್ಮ ತಮ್ಮ ಅಕ್ಕಪಕ್ಕದ ರೈತರಿಗೆ ತಿಳಿ ಹೇಳುವಂತೆ ತಿಳಿಸಿದರು.ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ವಿಶ್ವಾಸ್, ಮುಖೇಶ್ ಹಾಜರಿದ್ದು, ರೈತರ ಸಮಸ್ಯೆ ಆಲಿಸಿ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಸಭೆಯಲ್ಲಿ ಬಿ.ವಿ ಲೋಕೇಶ್, ವಿಷಕಂಠೇಗೌಡ, ಶ್ರೀನಿವಾಸೇಗೌಡ, ಬಿ.ಟಿ ಸ್ವಾಮಿ, ಸುನೀಲ್‌ಕುಮಾರ್, ಆನಂದೂರು ಸ್ವಾಮಿ, ಪಾಲಹಳ್ಳಿ ರಮೇಶ್‌ಬಾಬು, ಸತ್ಯರಾಜ್, ಚಂದನ್, ಭರತ್ ಕುಮಾರ್ ಸೇರಿದಂತೆ ಬೊಮ್ಮೂರು ಅಗ್ರಹಾರ, ಪಾಲಹಳ್ಳಿ, ಕಾರೇಕುರ, ಕೆಂಪಲಿಂಗಾಪುರ, ಬೆಳಗೊಳ, ಮಜ್ಜಿಗೆಪುರ, ಹುಲಿಕೆರೆ, ಹೊಸ ಉಂಡವಾಡಿ ಇತರೆ ಗ್ರಾಮಗಳ ನೂರಾರು ರೈತರು ಇದ್ದರು.