ಕನ್ನಡಪ್ರಭ ವಾರ್ತೆ ಮೇಲುಕೋಟೆ
ಅನ್ನದಾನ ಭವನ ಚಾಲನೆಯಂದು ಸಚಿವರು ಲಕ್ಷ ರು. ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಮಹಾವಿಷ್ಟುವಿನ ದರ್ಶನಕ್ಕೆ ಪ್ರಶಸ್ತ ದಿನವಾದ ಏಕಾದಶಿಯೂ ಸೇರಿದ ಶನಿವಾರ ಮೇಲುಕೋಟೆಗೆ ಆಗಮಿಸಿದ ಸಚಿವರ ಪತ್ನಿ ಧನಲಕ್ಷ್ಮಿ ಸ್ಥಾನಾಚಾರ್ಯ ಹಾಗೂ ದೇವಾಲಯದ ಪಾರುತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಚೆಲುವನಾರಾಯಣಸ್ವಾಮಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ದೇವಾಲಯದ ಮುಂಭಾಗ ಕಾರ್ಯ ನಿರ್ವಾಹಕ ಅಧಿಕಾರಿ ಶೀಲಾರಿಗೆ ಚೆಕ್ ಹಸ್ತಾಂತರಿಸಿದರು.
ಚೆಲುವನಾರಾಯಣಸ್ವಾಮಿಯವರ ಅನ್ನದಾನ ಭವನ ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ನಡೆಯಬೇಕು. ಭಕ್ತರು ಉದಾರವಾಗಿ ಅನ್ನದಾನ ಭವನಕ್ಕೆ ಸಹಾಯ ಮಾಡಬೇಕು. ವರ್ಷದಲ್ಲಿ ಒಂದೊಂದು ದಿನ ಭಕ್ತರಿಗೆ ಅನ್ನದಾನ ಮಾಡಲು ದಾನಿಗಳು ಮುಂದೆ ಬಂದು ಸ್ವಾಮಿ ಕೈಂಕರ್ಯದಲ್ಲಿ ಭಾಗಿಯಾಗಬೇಕು ಎಂದರು.ನಂತರ ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿದ ಧನಲಕ್ಷ್ಮಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಪಡೆದರು. ಈವೇಳೆ ಹಾಜರಿದ್ದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪ್ರತಿಕ್ರಿಯಿಸಿ ದೇವಾಲಯದ ಅನ್ನದಾನ ಕೈಂಕರ್ಯಕ್ಕೆ ಸಚಿವರ ಪತ್ನಿ ಧನಲಕ್ಷ್ಮಿಯವರು ಲಕ್ಷರೂ ಕಾಣಿಕೆ ನೀಡಿ ಮಾದರಿಯಾಗಿದ್ದಾರೆ. ಸಚಿವ ದಂಪತಿಗಳು ವೈಯುಕ್ತಿಕವಾಗಿ ಹಲವು ಕೈಂಕರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಈ ವೇಳೆ ಶ್ರೀನಿವಾಸನ್ ಗುರೂಜಿ ಆಷಾಢ ಮಾಸದ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಜುಲೈ 12 ರಂದು ಮಹಾಭಿಷೇಕ -ಕಲ್ಯಾಣೋತ್ಸವದಿಂದ ಆರಂಭವಾಗಿ 10 ದಿನಗಳ ಕಾಲ ನಡೆಯಲಿದೆ. ಜುಲೈ 16ರಂದು ಐತಿಹಾಸಿಕ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ.
ಮೈಸೂರು ಮಹಾಜರಾಗಿದ್ದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಹೆಸರಲ್ಲಿ ನಡೆಯುವ ಬ್ರಹ್ಮೋತ್ಸವದಲ್ಲಿ ಭಕ್ತರು ಪುಷ್ಪಕೈಂಕರ್ಯ ಸೇವೆ, ಅನ್ನದಾನ, ಉತ್ಸವ ವಾಹನೋತ್ಸವ ಮಾಡಿಸಲು ಅವಕಾಶವಿದೆ. ದಾನಿಗಳು ಮುಂದೆ ಬಂದು ಜಾತ್ರಾ ಮಹೋತ್ಸವದಲ್ಲಿ ಸೇವೆ ಮಾಡಬಹುದು ಎಂದು ಶ್ರೀನಿವಾಸನ್ ಗುರೂಜಿ ಮಾಹಿತಿ ನೀಡಿದರು.