ಹಾವೇರಿ: ಯೋಗವೆಂದರೆ ಕೇವಲ ವ್ಯಾಯಾಮ ಅಲ್ಲ, ಅದು ಆರೋಗ್ಯಕರ ಅಭ್ಯಾಸವಾಗಿದ್ದು, ಮಾನವನ ದೇಹ, ಮನಸ್ಸು ಮತ್ತು ಆತ್ಮ ಒಂದುಗೂಡಿಸುವ ಕೆಲಸ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಆಸ್ತಿ ಇದ್ದವರು ಮಾತ್ರ ಶ್ರೀಮಂತರಲ್ಲ. ಉತ್ತಮ ಅರೋಗ್ಯ ಹೊಂದಿದವರು ನಿಜವಾದ ಶ್ರೀಮಂತರು, ಜೀವನದಲ್ಲಿ ಕೇವಲ ಆಸ್ತಿ ಮುಖ್ಯವಲ್ಲ ಆಸ್ತಿ ಜತೆಗೆ ನಮಗೆ ಬೇಕಾಗಿರುವುದು ಒಳ್ಳೆಯ ಆರೋಗ್ಯ ಮತ್ತು ಯೋಗಕ್ಷೇಮ ಜೀವನದ ಸಂತೋಷಕ್ಕೆ ಯೋಗ ಮುಖ್ಯ ಅಂಶವಾಗಿದೆ ಎಂದರು.
ಆತ್ಮ ಶುದ್ಧಿಯ ಸಾಧನೆಗಾಗಿ ಮಹರ್ಷಿ ಪತಂಜಲಿಯವರು ಎಂಟು ಸೂತ್ರ ನೀಡಿದ್ದಾರೆ. ನಾವು ಅವುಗಳನ್ನು ಎಂಟು ಅಂಗಾಂಗ ಎಂದು ಕರೆಯುತ್ತೇವೆ ಅವುಗಳು ಯಮ, ನಿಯಮ, ಆತ್ಮ, ಪ್ರಾಣಾಯಾಮ, ಪ್ರತ್ಯಹಾರ, ಏಕಾಗ್ರತೆ, ಧ್ಯಾನ, ಸಮಾಧಿ ಸಾಕ್ಷಾತ್ಕಾರ ಈ ಎಲ್ಲ ಅಂಗಾಂಗಗಳನ್ನು ಅಭ್ಯಾಸ ಮಾಡುವುದರ ಮೂಲಕ ಸ್ವಯಂ ಸಾಕ್ಷಾತ್ಕಾರ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗಲಿದೆ. ಹಾಗೆಯೇ ವೈಯಕ್ತಿಕ ಪರಿವರ್ತನೆ ಮತ್ತು ಮಾನಸಿಕ ಪರಿವರ್ತನೆ ಆಗಲಿಕ್ಕೆ ಈ ಎಂಟು ಅಂಗಾಂಗಗಳು ಕಾರಣವಾಗುತ್ತವೆ. ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.ಯೋಗವು ಮಾನವ ಸಂಕುಲಕ್ಕೆ ಮತ್ತು ಪ್ರಾಚೀನ ಭಾರತಕ್ಕೆ ಒಂದು ಭವ್ಯ ಕೊಡುಗೆ ನೀಡಿದೆ. ಇವತ್ತಿನ ವೈವಿದ್ಯಮಯ ಜೀವನದಲ್ಲಿ ಸೌಹಾರ್ದತೆ ಮೂಡಿಸಲು ಯೋಗವು ತುಂಬಾನೇ ಮಹತ್ವಧಾಯಕವಾಗಿದೆ. ಈ ನಿಟ್ಟಿನಲ್ಲಿ ಜೂ. 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಇಡೀ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ ಅಂತಾರಾಷ್ಟ್ರೀಯ ಮಟ್ಟದವರೆಗೂ ಇಂದು ಯೋಗವು ಪಸರಿಸಿದೆ ಎಂದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ಪ್ರತಿ ನಿತ್ಯ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೃದ್ಧಿಗೆ ಸಹಕಾರಿಯಾಗಿದೆ. ಯೋಗದಿಂದ ಮನಸ್ಸು ಮತ್ತು ದೇಹ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಪ್ರತಿ ನಿತ್ಯ ಯೋಗ, ಪ್ರಾಣಾಯಾಮ ಮಾಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.